Saturday, 19 December 2015

ಉಕ್ತಲೇಖನ ಎಂದರೇನು?

ಉಕ್ತಲೇಖನ ಅಂದ್ರೆ ಬಹುಶಃ ಈಗಿನ ಮಕ್ಕಳಿಗೆ- ಬರೀ ಮಕ್ಕಳಿಗೆ ಏನು,ದೊಡ್ಡವರಿಗೂ- ಗೊತ್ತಿರೋಲ್ಲ.
ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಉಕ್ತಲೇಖನ ಎನ್ನುವುದು ಪಠ್ಯದ ಒಂದು ಭಾಗವಾಗಿತ್ತು.ನಿಗದಿತ ಪೀರಿಯಡ್‌ನ‌ಲ್ಲಿ ಮೇಷ್ಟ್ರು ಪಾಠದ ಒಂದು ಭಾಗವನ್ನು ಓದುತ್ತಿದ್ದರು. ಅದನ್ನು ಹುಡುಗರೆಲ್ಲ ಬರೆದುಕೊಳ್ಳಬೇಕು. ನಂತರ ಅವುಗಳನ್ನು ಪರೀಕ್ಷಿಸೋರು. ಇದರಿಂದ ವಿದ್ಯಾರ್ಥಿಗಳ ಶ್ರವಣ, ಮನನ, ಅಭಿವ್ಯಕ್ತಿತನ, ವ್ಯಾಕರಣದ ಗುಣಮಟ್ಟ, ಗುಂಡಾಗಿ ಬರೆಯುವ ಕಲೆ ಇವುಗಳೆಲ್ಲ ಗೊತ್ತಾಗ್ತಿತ್ತು.

ಹೀಗೆ ಇನ್ನೊಬ್ಬರು ಹೇಳಿದ್ದನ್ನು ಬರೆದುಕೊಳ್ಳುವಾಗ ಸುಮ್ಮನೇ ಬರೆದುಕೊಳ್ಳುವುದಲ್ಲ. ಕಿವಿಯಲ್ಲಿ ಕೇಳಿಸಿಕೊಂಡಿದ್ದನ್ನು ಅರ್ಥ ಮಾಡಿಕೊಂಡು ಬರೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಎರಡು ಬಗೆಯ ಗ್ರಹಿಕೆಯ ಲಾಭ ಸಿಗುತ್ತಿತ್ತು. ವಿದ್ಯಾರ್ಥಿಗಳು ಯಾವುದಾದರೂ ಪಠ್ಯದಲ್ಲಿ ಸ್ವಲ್ಪ ಹಿಂದೆ ಅನಿಸಿದರೆ ಮನೇಲಿ ಅಪ್ಪ ಅಮ್ಮನ ಬಳಿ, "ನನಗೆ ಉಕ್ತಲೇಖನ ಕೊಡು' ಎನ್ನುತ್ತಿದ್ದರು. ಅರ್ಥವಾಗದ ಪಾಠವನ್ನು ಕಿವಿಯಿಂದ ಕೇಳಿಸಿಕೊಂಡು ಬರೆದರೆ ಸ್ವಲ್ಪ ಬೇಗ ತಲೆಗೆ ಹೋಗುತ್ತದೆ ಮತ್ತು ಅಲ್ಲೇ ಇರುತ್ತದೆ ಎನ್ನೋದು ಒಂದು ನಂಬಿಕೆ. ಮನೇಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಅಪ್ಪನೋ ಅಮ್ಮನೋ, "ಎಲ್ಲಿ ನಾನು ಹೇಳ್ತೀನಿ ನೀನು ಬರೆ ' ಅನ್ನೋರು.

ಉಕ್ತಲೇಖನ ಬರೆಯುವಾಗ ಮಕ್ಕಳು ಜಾಗೃತರಾಗಿರಬೇಕು. ಏಕೆಂದರೆ, ಅವರು ಇಂಗ್ಲಿಷಾಗಲೀ, ಕನ್ನಡವಾಗಲೀ, ಏನು ಕೇಳಿಸಿಕೊಳ್ಳುತ್ತಾರೋ ಅದನ್ನು ವ್ಯಾಕರಣ ಶುದ್ಧಿಯಿಂದ ಬರೆಯಬೇಕು. ಪಾಠ ಅರ್ಥವಾಗುವುದರ ಜೊತೆಗೆ ವಿದ್ಯಾರ್ಥಿಗಳ ವ್ಯಾಕರಣವೂ ಶುಯಾಗೋದು.

ಉಕ್ತಲೇಖನದ ಇನ್ನೊಂದು ವೈಶಿಷ್ಟ್ಯ ಅಂದರೆ ವಿದ್ಯಾರ್ಥಿಗಳು ಏನು ಕೇಳಿಸಿಕೊಳ್ಳುತ್ತಾರೋ ಅದನ್ನು ಬಾಯಲ್ಲಿ ಹೇಳಿಕೊಂಡು ಬರುವಂತೆ ಹೇಳುತ್ತಿದ್ದರು. ಇದು ಶಾಲೆಯಲ್ಲಿ ಸಾಧ್ಯವಾಗದಿದ್ದರೂ ಮನೆಯಲ್ಲಿ ಸಾಧ್ಯವಾಗುತ್ತಿತ್ತು. ತಂದೆ ಮಗನನ್ನು ಮುಂದೆ ಕೂರಿಸಿಕೊಂಡು ಶ್ರೀರಾಮನು ಕಾಡಿಗೆ ಹೊರಟಾಗ ನಾನೂ ಬರ್ತಿನಿ ಅಂತ ಲಕ್ಷ್ಮಣನೂ,ಸೀತೆಯೂ ಅವನ ಹಿಂದೆ ಹೊರಟರು. ಅವರು ಹೊರಟಿದ್ದನ್ನು ನೋಡಿ ಇಡೀ ಅಯೋಧ್ಯೆಯೇ ಕಣ್ಣೀರಿಟ್ಟಿತು ಅಂತ ಹೇಳಿದರೆ ಮಗ ಅದನ್ನು ಬರೆಯುವಾಗ ತನ್ನ ಬಾಯಿಂದ ಶ್ರೀರಾಮನು ಕಾಡಿಗೆ... ಅಂತ ಉಚ್ಚರಿಸುತ್ತ ಬರೆಯುತ್ತಾನೆ. ಬಾಯಿಯಲ್ಲಿ ಹೇಳಿಕೊಂಡು ಬರೆಯುವಾಗ ಶ್ರೀರಾಮನು ಎನ್ನುವಾಗ ನು ಎನ್ನುವುದು ಹ್ರಸ್ವವೋ ದೀರ್ಘ‌ವೋ ಎನ್ನುವುದು ಗೊತ್ತಾಗಿಬಿಡುತ್ತದೆ. ಹಾಗೆಯೇ ಲಕ್ಷ್ಮಣನೂ ಸೀತೆಯೂ ಎನ್ನುವಾಗ ನೂ ಮತ್ತು ಯೂ ದೀರ್ಘ‌ವಾಗಿರಬೇಕು ಎನ್ನುವುದೂ ಗೊತ್ತಾಗುತ್ತದೆ. ಅಂದರೆ ನಾನು ಕಿವಿಯಲ್ಲಿ ಕೇಳಿಸಿಕೊಂಡಿದ್ದನ್ನು ಹಾಳೆಯ ಮೇಲೆ ಸರಿಯಾಗಿ ಬರೆಯುತ್ತಿದ್ದೀನಿ ಎನ್ನುವುದರ ಜೊತೆಗೆ ಶ್ರೀರಾಮ, ಲಕ್ಷ¾ಣ, ಸೀತೆ ಇವರುಗಳ ಮೂರ್ತಿ ಮತ್ತು ಕಣ್ಣೀರಿಡುತ್ತಿರುವ ಅಯೋಧ್ಯೆಯ ಜನ ಕಾಣಿಸುತ್ತಾರೆ. ಇಲ್ಲಿ ಉಕ್ತಲೇಖನ ಎಂದರೆ ಬರೀ ಬರೆಯುವ ಕ್ರಿಯೆ ಮಾತ್ರ ನಡೆಯುತ್ತಿಲ್ಲ. ಬದಲಿಗೆ ಕೇಳಿಸಿಕೊಂಡಿದ್ದನ್ನು ಒಂದು ವ್ಯಕ್ತಿಚಿತ್ರವಾಗಿ ಕಣ್ಮುಂದೆ ತಂದುಕೊಂಡು ಬರೆಯುವಾಗ ಆ ಅಂಶ ಮನದಲ್ಲಿ ದಟ್ಟವಾಗುತ್ತದೆ. ಬರೆಯುವ ಮುನ್ನ ವ್ಯಾಕರಣ ಮನದಲ್ಲಿ ವ್ಯಕ್ತವಾಗಿರುತ್ತದೆ. ಇನ್ನು ತಂದೆ ಹೇಳಿಕೊಟ್ಟಿದ್ದನ್ನು ಮಗ ಬಾಯಲ್ಲಿ ಹೇಳಿಕೊಂಡು ಬರೆಯುವಾಗ ತಂದೆ ನಾನು ಹೇಳಿದ್ದನ್ನು ಮಗ ಸರಿಯಾಗಿ ಉಚ್ಚರಿಸುತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನೂ ಗಮನಿಸಿ ತಪ್ಪಿದ್ದರೆ ಅಲ್ಲೇ ತಿದ್ದುತ್ತಾರೆ. ಹೀಗಾಗಿ ಬರೆಯುವ ಮುನ್ನವೇ ಪಕ್ವತೆ ಇರುತ್ತದೆ. ಇನ್ನು ಮಕ್ಕಳ ಕೈ ಬರಹದ ಬಗೆಗೂ ಇದು ಪರಿಪಕ್ವತೆ ತಂದುಕೊಡುತ್ತದೆ. ಹೇಗೆಂದರೆ ಮಗ ಸರಿಯಾಗಿ ಕೇಳಿಸಿಕೊಂಡಿರಬಹುದು, ಸರಿಯಾಗಿ ಉಚ್ಚರಿಸಿರಬಹುದು ಅದನ್ನು ಹಾಳೆಯಲ್ಲಿ ಸರಿಯಾಗಿ ಬರೆದಿರಲೂ ಬಹುದು. ಆದರೆ ಕೈಬರಹದ ಶೈಲಿಯಿಂದಾಗಿ ಅದು ಸರಿಯಾಗಿ ಕಾಣದಿರಬಹುದು. ಪೋಷಕರಿಗೆ ಇದನ್ನು ಸರಿಪಡಿಸಲು ಇದೊಂದು ಅವಕಾಶವಾಗುತ್ತದೆ. ಉಕ್ತ ಲೇಖನ ಬರೆಯುತ್ತ ಬರೆಯುತ್ತ ಬರೆಯುವ ವೇಗ ಹೆಚ್ಚಾಗುವುದರ ಜೊತೆಗೆ ಕೈಬರಹದ ಗುಣಮಟ್ಟವೂ ಸುಧಾರಿಸುತ್ತಾ ಬರುತ್ತದೆ. ಹೀಗೆ ಉಕ್ತಲೇಖನದಲ್ಲಿ ಮೂರು ಬಗೆಯ ಪರಿಪಕ್ವತೆಯನ್ನು ಸಾಧಿಸಲು ಅವಕಾಶ ಇತ್ತು. ಮಕ್ಕಳಿಗೆ ಯಾವಾಗಲೂ ಓದು ಎನ್ನುತ್ತಿದ್ದರೆ ಅವರಿಗೆ ಬೇಜಾರಾಗುವುದು ಸಹಜ. ಹೀಗಾಗಿ ಪೋಷಕರು ಮಕ್ಕಳನ್ನು ಗೃಹಕೃತ್ಯದ ಕೆಲಸಗಳಲ್ಲೂ ತೊಡಗಿಸುತ್ತಿದ್ದರು. ಅಂಗಡಿಯಿಂದ ಮನೆಗೆ ಪದಾರ್ಥ ತರಬೇಕಾದ ಸಂದರ್ಭದಲ್ಲಿ, "ಮಗನನ್ನು ಬಾ ಇಲ್ಲಿ , ಒಂದು ಪೇಪರು ಪೆನ್ನು ತಗೊಂಡು ಬಾ' ಅಂತ ಹೇಳಿ, "ನೋಡು ಎಡಭಾಗಕ್ಕೆ ಕ್ರಮ ಸಂಖ್ಯೆ ಅಂತ ಬರಿ. ಮಧ್ಯದಲ್ಲಿ ಪದಾರ್ಥದ ವಿವರ ಅಂತ ಬರಿ. ಕಡೆಗೆ ಕೆ.ಜಿ. ಅಂತ ಬರಿ. ಅವುಗಳ ಕೆಳಗೆ ಒಂದು ಗೆರೆ ಹಾಕು. ಈಗ ಬರ್ಕೊಂಡು ಹೋಗು... ಒಂದು, ತೊಗರೀಬೇಳೆ- ಎರಡು ಕೆಜಿ ಮುಂದಿನ ಸಾಲು ಎರಡು, ಉದ್ದಿನ ಬೇಳೆ- ಒಂದು ಕೆ.ಜಿ ಅಂತ ಹೇಳಿಕೊಂಡು ಹೋದರೆ ಮನೆಗೆ ಬೇಕಾದ‌ ಪದಾರ್ಥದ ಪಟ್ಟಿಯೂ ಸಿದ್ಧವಾಗುತ್ತಿತ್ತು, ಉಕ್ತಲೇಖನವೂ ಆಗುತ್ತಿತ್ತು. ಮುಂದೆ ಯಾವುದಾದರೂ ಸಂದರ್ಭದಲ್ಲಿ ಅನೇಕ ಪದಾರ್ಥಗಳ ಪಟ್ಟಿ ಮಾಡಬೇಕಾದಾಗ ಇದು ಕ್ರಮ ಅಂತ ಮಕ್ಕಳಿಗೆ ಗೊತ್ತಾಗುತ್ತಿತ್ತು

ಸಂಬಂಧಗಳನ್ನು ಬೆಸೆಯುವಲ್ಲಿ ಕೂಡಾ ಉಕ್ತಲೇಖನಗಳು ಸಹಕಾರಿಯಾಗಿದ್ದವು. ಹೇಗೆಂದರೆ ಬೇರೆ ಊರಿನಲ್ಲಿರುವ ಮನೆಯ ಹಿರಿಯರಿಗೆ ಕಾಗದ ಬರೆಯಬೇಕಾದ ಸಂದರ್ಭ ಬಂದಾಗ ಪೋಷಕರು ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದರು. ಇಂಥಾ ಉಕ್ತಲೇಖನದಿಂದ ಮಕ್ಕಳಿಗೆ ತಮ್ಮ ಮಾತೃಭಾಷೆಯನ್ನು ಬರೆಯುವ, ಓದುವ ಒಂದು ಪರಿಪಾಠ ಇರುತ್ತಿತ್ತು. ಜೊತೆಗೆ ತಮ್ಮ ಅಜ್ಜ ಅಜ್ಜಿ , ಸೋದರ ಮಾವ, ಅತ್ತೆ ಇವರುಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಹೋಗುವ ಕಲೆಯೂ ಸಿದ್ಧಿಸುತ್ತಿತ್ತು. ಪೋಷಕರು ಮಕ್ಕಳನ್ನು ಕೂರಿಸಿಕೊಂಡು ಉಕ್ತಲೇಖನ ಕೊಡುವಾಗ ಅದು ಬರೀ ಉಕ್ತಲೇಖನವಾಗುತ್ತಿರಲಿಲ್ಲ. ಬದಲಿಗೆ ಒಂದು ಸಂಸ್ಕಾರ ಇರುತ್ತಿತ್ತು. ಕಾಗದ ಬರೆಯುವ ವಿಧಾನ, ಯಾರನ್ನು ಹೇಗೆ ಸಂಬೋಧಿಸಬೇಕು ಎನ್ನುವ ತಿಳುವಳಿಕೆ, ಬಹುವಚನ ಬಳಸುವ ವಿಧಾನ ಇವೆಲ್ಲ ಅರಿವಿಗೆ ಬರುತ್ತಿತ್ತು. "ಕಾಗದ ಪೆನ್ನು ತಗೊಂಡ್ಯಾ ಸರಿ ಈಗ ಸರಿಯಾಗಿ ಕೂತ್ಕೊ' ಎನ್ನೋರು. ಏಕೆಂದರೆ, ಏನು ಕೆಲಸ ಮಾಡಬೇಕಾದರೂ ಶಿಸ್ತು ಇರಬೇಕು. ನಾವು ಸರಿಯಾಗಿ ಕೂರದೇ, ಸರಿಯಾಗಿ ಪೆನ್ನು, ಹಾಳೆ ಹಿಡಿಯದೇ ಬರೆಯುವ ವಿಷಯ ಹೇಗೆ ಸರಿಯಾಗಿದ್ಧೀತು ಎನ್ನೋ ಮನೋಭಾವ. ಯಾವ ಕೆಲಸ ಮಾಡಬೇಕಾದರೂ ತ್ರಿಕರಣ ಶುದ್ದಿಯಿಂದ ಮಾಡಬೇಕು ಅಂತಾರಲ್ಲ ಹಾಗೆ. ಕಾಗದ ಬರೆಯೋಕ್ಕೆ ಕೂತರೆ ಅದರಲ್ಲಿಯೇ ಸಂಪೂರ್ಣ ಗಮನ ಇರಬೇಕು. ಹೀಗೆ ಪೋಷಕರು ಮಕ್ಕಳನ್ನು ಕೂರಿಸಿಕೊಂಡು ಉಕ್ತಲೇಖನ ಕೊಡುವಾಗ ಮಕ್ಕಳು ಅದನ್ನು ಬರೆಯುತ್ತ ಹೋಗುವಾಗ ಅವರಿಗೆ ಸಂಬಂಧಗಳು ಅಂದರೆ ಹೀಗಿರುತ್ತೆ, ದೊಡ್ಡವರಿಗೆ ಕಾಗದ ಬರೆಯುವಾಗ ಹೀಗೆ ಬರೆಯಬೇಕು, ವಿಷಯವನ್ನು ಹೀಗೆ ಪ್ರಸ್ತಾಪಿಸಬೇಕು, ಹೀಗೆ ಮುಂದುವರಿಸಬೇಕು, ನಮ್ಮ ವಿಚಾರಗಳನ್ನು ಹೀಗೆ ಅಭಿವ್ಯಕ್ತಿಗೊಳಿಸಬೇಕು, ಅವರ ಸೌಖ್ಯವನ್ನು ಹೀಗೆ ವಿಚಾರಿಸಿಕೊಳ್ಳಬೇಕು ಮುಂತಾದ ವಿಷಯಗಳೆಲ್ಲ ಅರ್ಥವಾಗುತ್ತಿತ್ತು.

ಜ್ಞಾನಾರ್ಜನೆಯ ಮಾತು ಬಂದಾಗ ಓದು ಬರಹವೇ ಬಾರದವರಿಗೆ ಒಂದನೇ ಕ್ಲಾಸು ಓದಿದ ಹುಡುಗ ಬುದ್ಧಿವಂತ. ಒಂದನೇ ಕ್ಲಾಸು ಓದಿದವನಿಗೆ ಎರಡನೇ ಕ್ಲಾಸು ಓದಿದವನು, ಹೀಗೆ ಯಾರು ನಮಗಿಂತ ಹೆಚ್ಚು ಓದಿರ್ತಾರೋ ಅವರು ನಮಗಿಂತ ಬುದ್ಧಿವಂತರು ಎನ್ನುವ ಒಂದು ಮನೋಭಾವ ಇದ್ದ ಕಾಲವೂ ಇತ್ತು. ಆಗ ಓದುಬರಹ ಬಾರದವರು ಇನ್ನೂ ಪ್ರೈಮರೀ ಶಾಲೆ ಓದುತ್ತಿರುವ ಹುಡುಗನನ್ನು ಕರೆದು, "ಮಗಾ ಬಾ ಇಲ್ಲಿ , ಊರಿನಲ್ಲಿ ನನ್ನ ತಂಗಿ ಇದಾಳೆ. ಅವಳಿಗೆ ಒಂದು ಕಾಗದ ಬರ್ಕೊಡ್ತೀಯಾ?. ನಾನು ಹೇಳ್ತೀನಿ;ನೀನು ಬರಿ, ನಿಂಗೆ ತಿಂಡಿ ಕೊಡ್ತೀನಿ' ಅನ್ನೋರು. ಹುಡುಗ ಅಂಚೆಕಚೇರಿಗೆ ಹೋಗಿ ಒಂದು ಅಂತರ್ದೇಶೀಯ ಪತ್ರ ತಂದು ಅವರ ಮುಂದೆ ಕೂತು ಅವರು ಹೇಳಿದ್ದನ್ನು ಬರೆಯೋನು. "ಮಗಾ ಬರಿ, ಲೇ ನಿಂಗೀ, ನೀನು ಊರಿಗೆ ಬರ್ತೀನಿ ಅಂತ ಹೇಳಿದ್ಯಲ್ಲ, ಯಾವಾಗ ಬರ್ತೀಯಾ, ಬರುವಾಗ ಹಸಿನ ತುಪ್ಪ ತಗೊಂಬಾ, ಹಾಗೆ ನೀನು ಹೊಸದಾಗಿ ಕಿವಿ ಓಲೆ ಮಾಡಿಸ್ಕೊಂಡೆ ಅಂತ ಹೇಳಿದ್ಯಲ್ಲ;ಅದನ್ನು ಹಾಕೊಂಡ ಬಾ, ನಾನು ನೋಡ್ಬೇಕು.ಇಲ್ಲಿ ಸೀತಾರಾಮಯ್ಯ ಅನ್ನೋರ ಮಗ ಒಬ್ಬ ಇದಾನೆ, ಅವನು ನಿನ್ನ ಮಗಳಿಗೆ ಸರಿಹೋಗಬಹುದು. ಅದಕ್ಕೇ ಬರ್ತಾ ನಿನ್ನ ಮಗಳ ಜಾತಕ ತಗೊಂಡು ಬಾ. ದೇವರು ಇಟ್ಟ ಹಾಗಾಗಲಿ, ಈ ಕಾಗದ ನಿಂಗೆ ಸಿಕ್ಕ ಕೂಡಲೇ ಯಾವಾಗ ಬರ್ತೀಯಾ ಅಂತ ಕಾಗದ ಬರಿ...ಇತಿ ನಿನ್ನ ಅಕ್ಕ ಮಹದೇವಮ್ಮ'.ಇಷ್ಟು ಬರೆಸಿದ ಮಹದೇವಮ್ಮನಿಗೆ ತಂಗಿಯ ಜೊತೆ ಮಾತಾಡಿದ ಅನುಭವವಾಗುತ್ತಿತ್ತು. "ಮಗಾ ನೀನು ಬರಿದಿರೋದನ್ನು ಒಂದ್ಸಾರಿ ಓದು' ಅಂತ ಧ್ಯಾನಮಗ್ನರಾಗಿ ಹುಡುಗ ಓದುವುದನ್ನು ಕೇಳಿಸಕೊಳ್ಳುತ್ತಿದ್ದರು. ಇಲ್ಲಿ ಉಕ್ತಲೇಖನ ಬರೆದುಕೊಳ್ಳುವ ಹುಡುಗ ತಾನು ಕೇಳಿಸಿಕೊಂಡಿದ್ದನ್ನು ಸರಿಯಾಗಿ ಬರೆದಿದ್ದರೆ ಮಾತ್ರ ಓದುವಾಗ ಸರಿಯಾಗಿ ಓದೋಕೆ ಆಗುತ್ತಿತ್ತು. ಇಲ್ಲಿ ಬರವಣಿಗೆ ಓದುಗಾರಿಕೆ ಕೈಬರಹ ಎಲ್ಲ ಒಂದು ಹದಕ್ಕೆ ಇರಬೇಕಾಗಿತ್ತು. ಇದೊಂದು ಕಲೆ. ಉಕ್ತಲೇಖನ ಅಭ್ಯಾಸ ಮಾಡುತ್ತ ಹೋದ ಹಾಗೆ ಈ ಕಲೆ ಪರಿಪಕ್ವವಾಗುತ್ತ ಹೋಗುತ್ತದೆ. ಜೊತೆಗೆ ಅಕ್ಕ-ತಂಗಿಯರ ಅನುಬಂಧ ಎಂದರೆ ಏನು, ಅದು ಹೇಗಿರುತ್ತೆ, ಸಂಬಂಧಗಳು ಹೇಗೆ ಚಿಗುರೊಡೆಯುತ್ತವೆ ಅಂತ ಅರಿಯುವುದರ ಜೊತೆಗೆ ಒಂದು ಊರಿನಲ್ಲಿ ಒಂದು ಕಡೆ ಇರುವಾಗ ಇನ್ನೊಬ್ಬರಿಗೆ ಹೇಗೆ ಸಹಾಯಕರಾಗಿರಬೇಕು ಎನ್ನುವುದು ಕೂಡಾ ಅರ್ಥವಾಗುತ್ತಿತ್ತು.ಬರೆಯುತ್ತ ಬರೆಯುತ್ತ ಹೋದ ಹಾಗೆ ನಮ್ಮ ಕೈಬರಹ ಶುದ್ದವಾಗುತ್ತಿತ್ತು. ನಾವು ಓದುತ್ತಿದ್ದಾಗಿನ ಪರೀಕ್ಷೆಗಳಲ್ಲಿ ಶುದ್ದವಾದ ಕೈಬರಹಕ್ಕೆ ಐದು ಮಾರ್ಕು ಇರುತ್ತಿತ್ತು. ಎಷ್ಟೋ ವಿದ್ಯಾರ್ಥಿಗಳು ಈ ಐದು ಮಾರ್ಕಿನ ಸಹಾಯದಿಂದ ಪಾಸಾಗಿಬಿಡುತ್ತಿದ್ದರು.

ಉಕ್ತಲೇಖನದಲ್ಲಿ ಹಿಡಿತ ಸಾಧಿಸಬೇಕು ಅಂತ ಶ್ರದ್ಧೆ ಇದ್ದ ಮಕ್ಕಳು ಆಕಾಶವಾಣಿಯಲ್ಲಿ ಬರುತ್ತಿದ್ದ ವಾರ್ತೆಗಳನ್ನು ಕೇಳಿಸಿಕೊಂಡು ಬರೆದುಕೊಳ್ಳುತ್ತಿದ್ದರು. ಇದರಿಂದ ಬರವಣಿಗೆ ವೇಗ ಹೆಚ್ಚುತ್ತಿತ್ತು. ಕೇಳಿಸಿಕೊಂಡಿದ್ದನ್ನು ಒಂದೆರಡು ಕ್ಷಣ ಮನದಲ್ಲಿ ಇಟ್ಟುಕೊಂಡು ಬರೆಯುವ ಜ್ಞಾಪಕಶಕ್ತಿಯೂ ವೃದ್ದಿಸುತ್ತಿತ್ತು. ಜೊತೆಗೆ ವೇಗವಾಗಿ ಬರೆಯುವಾಗಲೂ ಕೈಬರಹದ ಗುಣಮಟ್ಟ ಕಾಯ್ದುಕೊಳ್ಳುವ ಕಲೆಯೂ ಸಿದ್ದಿಸುತ್ತಿತ್ತು. ಮನೆಯಲ್ಲಿ ಮಕ್ಕಳು ಸುಮ್ಮನೇ ಆಟಾಡಿಕೊಂಡು ಗಲಾಟೆ ಮಾಡ್ತಾ ಇದ್ದರು ಅಂದ್ರೆ ಪೋಷಕರು ಉಕ್ತಲೇಖನ ಕೊಡುವ ಪರಿಪಾಠ ಇಟ್ಟುಕೊಂಡಿದ್ದರು. ವಿಷಯ ಪಾಠಕ್ಕೆ ಸಂಬಂಧಪಟ್ಟದ್ದೇ ಅಲ್ಲದೇ ಇನ್ನಿತರ ವಿಷಯಗಳಾದರೂ ಸರಿ ಮಕ್ಕಳಲ್ಲಿ ಶ್ರವಣ, ಮನನ, ಅಭಿವ್ಯಕ್ತಿತನ ಇವೆಲ್ಲ ಉತ್ತಮವಾಗಲು ಸಹಕಾರಿಯಾಗುತ್ತಿದ್ದವು. ಕೆಲವು ಮನೆಗಳಲ್ಲಿ ಈಗಲೂ ತಿಂಗಳಿಗೊಂದು ಸಾರಿ ಮನೆಗೆ ಬೇಕಾದ ದಿನಸಿಗಳನ್ನು ತರುವಾಗ ಮಾಡುವ ಪಟ್ಟಿಯನ್ನು ಮಕ್ಕಳಿಂದಲೇ ಮಾಡಿಸುತ್ತಾರೆ. ತಾಯಿ ಹೇಳುತ್ತ ಹೋದ ಹಾಗೆ ಮಕ್ಕಳು ಬರೆದುಕೊಂಡು ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ನಾವು ಏನು ಕೇಳಿಸಿಕೊಳ್ಳುತ್ತೇವೋ ಅದನ್ನು ಸರಿಯಾಗಿ ಮನನ ಮಾಡಿಕೊಂಡು ಮತ್ತೆ ಅದನ್ನೇ ಸರಿಯಾಗಿ ಅಭಿವ್ಯಕ್ತಿಗೊಳಿಸುವ ಕಲೆಯಲ್ಲಿ ನಿಪುಣರಾದರೆ ಅವರು ಬೆಳೆದು ದೊಡ್ಡವರಾಗಿ ಕಚೇರಿ ಕೆಲಸಕ್ಕೆ ಹೋದರೆ ಅಲ್ಲಿ ಸಾಹೇಬರು ಹೇಳಿದ್ದನ್ನು ಬರೆದುಕೊಳ್ಳಬೇಕಾದಾಗ ಹೆಚ್ಚು ಶ್ರಮ ಎನಿಸುವುದಿಲ್ಲ. ಉಕ್ತಲೇಖನ ಕೊಡುವವರು ಮೊದಮೊದಲು ಅಲ್ಪವಿರಾಮ (ಕಾಮ ) ಪೂರ್ಣವಿರಾಮ (ಫ‌ುಲ್‌ಸ್ಟಾಪ್‌ ) ಗಳನ್ನೂ ಹೇಳ್ಳೋರು. ಮಕ್ಕಳು ಪರಿಣಿತಿ ಸಾಧಿಸಿದ ನಂತರ ಮಕ್ಕಳೇ ಅವುಗಳನ್ನು ಗ್ರಹಿಸಿಕೊಂಡು ಬರೆಯಬೇಕಿತ್ತು. ಮಕ್ಕಳು ಬರೆದಿದ್ದನ್ನು ಓದುವಾಗ ಅದರಲ್ಲಿ ತಪ್ಪು ಕಂಡರೆ ಮಕ್ಕಳನ್ನು ಕೂರಿಸಿಕೊಂಡು, "ನೋಡು, ಇಲ್ಲಿ ಒಂದು ಅಲ್ಪವಿರಾಮ ಬರಬೇಕಲ್ವ, ನೀನೇ ಓದು ಗೊತ್ತಾಗುತ್ತೆ' ಅಂದು ಮಕ್ಕಳು ಬರೆದಿದ್ದನ್ನು ತಾವೇ ಓದುತ್ತಾ - ನಾನು ಈ ವಿಷಯವಾಗಿ ನನ್ನ ಅಭಿಪ್ರಾಯ ತಿಳಿಸಬೇಕು ಎಂದರೆ- ಆದ ಮೇಲೆ ಒಂದು ಅಲ್ಪವಿರಾಮ ಇರಬೇಕಲ್ವ. ಅಲ್ಪವಿರಾಮ ಇದ್ದರೆ ಓದುವಿಕೆಗೆ ಸಹಾಯವಾಗುತ್ತದೆ. ಆಮೇಲೆ ಇಷ್ಟು ಮಾಡಿದರೆ ಎಲ್ಲ ಸರಿಹೋಗುತ್ತೆ ಎನ್ನುವಾಗ ಒಂದು ಪೂರ್ಣವಿರಾಮ ಇರಬೇಕು. ಉಕ್ತಲೇಖನ ತಗೊಂಡು ಬರೆಯುವಾಗ ಅಥವಾ ನಾವೇ ಬರೆಯುವಾಗ, ಸಾಲನ್ನು ಪ್ರಾರಂಭ ಮಾಡೋದು ಹೇಗೆ, ಮುಂದುವರಿಸೋದು ಹೇಗೆ, ಅಲ್ಪವಿರಾಮ ಎಲ್ಲಿ ಇಡಬೇಕು, ಪೂರ್ಣವಿರಾಮ ಎಲ್ಲಿ ಇಡಬೇಕು ಎನ್ನುವುದೆಲ್ಲ ಕರಗತವಾಗುತ್ತಿತ್ತು.ಉಕ್ತಲೇಖನ ನಿಜವಾಗಿ ಒಂದು ಉಪಯುಕ್ತ ಕ್ರಮ.

ಕೃಪೆ:ಬೇಲೂರು ರಾಮಮೂರ್ತಿ
(ಉದಯವಾಣಿ,19/12/15 ರ Article)

2 comments: