Thursday, 9 May 2019

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನ್ಮದಿನಾಚರಣೆ 2024

*ಮೇ 10,2024 ರಂದು ಹೇಮರೆಡ್ಡಿ ಮಲ್ಲಮ್ಮ ಜನ್ಮದಿನಾಚರಣೆಯ ಬಗ್ಗೆ  ಒಂದಿಷ್ಟು ಸಂಕ್ಷಿಪ್ತ ಮಾಹಿತಿ:*

*ಮಾಹಿತಿ* :
ಶ್ರೀ ದೀಪಕ ಎಸ್ ಗಣಾಚಾರಿ.
  (ಸಿ.ಆರ್.ಪಿ .ಬಿಳವಾರ).ತಾ:ಜೇವರ್ಗಿ.

*ಎಲ್ಲರಿಗೂ ಮಹಾಸಾದ್ವಿ,ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಹಾರ್ದಿಕ  ಶುಭಾಶಯಗಳು.*

ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಘನ ಕರ್ನಾಟಕ ಸರ್ಕಾರ ನಿರ್ಧರಿದ್ದು ಅದರಂತೆ ಮೇ 10, 2017 ರಂದು  ಮೊದಲ ಬಾರಿಗೆ ಹೇಮರಡ್ಡಿ ಮಲ್ಲಮ್ಮ ಅವರ ಜನ್ಮ ದಿನಾಚರಣೆಯನ್ನು ಅಧಿಕೃತ ಸರ್ಕಾರಿ ಜಯಂತಿಯಾಗಿ  ಆಚರಿಸಲಾಯಿತು.ಅಲ್ಲಿಂದ  ಈಚೆಗೆ ಪ್ರತಿ ವರ್ಷ ಮೇ 10 ರಂದು  ಮಹಾಸಾದ್ವಿ  ಹೇಮರಡ್ಡಿ  ಮಲ್ಲಮ್ಮ ಅವರ ಜನ್ಮ ದಿನಾಚರಣೆಯನ್ನು ನಾವು ನೀವೆಲ್ಲಾ  ಸೇರಿ ಆಚರಿಸುತ್ತಿದ್ದೇವೆ. ಈ  2024 ರ  ಮೇ 10ಕ್ಕೆ ನಾವು ಈ ಶಿವಶರಣೆ ಮಲ್ಲಮ್ಮ ಅವರ 8ನೇ  ಅಧಿಕೃತ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು  ಹೇಳಲು  ಹರ್ಷ  ವ್ಯಕ್ತ  ಪಡಿಸುತ್ತಿದ್ದೇನೆ. ಈ ವರ್ಷದ ಜಯಂತಿ ಅಂದಾಜು ಅವರ 602/603ನೇ  ಜಯಂತಿಯಾಗಿದೆ  ಎಂದು  ತಿಳಿದುಬಂದಿದೆ.ಇವರು 14ನೇ  ಶತಮಾನಕ್ಕೆ ಸೇರಿದ ಶಿವಶರಣೆಯಾಗಿದ್ದಾರೆ.

ಈ ದಿನ ಹಲವೆಡೆ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನ ಅವರ ಭಾವಚಿತ್ರವನ್ನು ಅಡ್ಡಪಲ್ಲಕ್ಕಿಯಲ್ಲಿಟ್ಟು ಊರಿನ  ಪ್ರಮುಖ  ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಮೆರವಣಿಗೆಯಲ್ಲಿ  ಮಹಿಳೆಯರು, ಕುಂಭ,ಕಳಶ ಹಿಡಿದು ಭಾಗವಹಿಸಿ, ನಂತರ ಊರಿನ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸುತ್ತಾರೆ.

*ಹೇಮರೆಡ್ಡಿ ಮಲ್ಲಮ್ಮ ಅವರ  ಸಂಕ್ಷಿಪ್ತ ಜೀವನ ಚರಿತ್ರೆ:*

     ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡ ಹೇಮರಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು. ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೇ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದರು.

      ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಪುರ(ಶಿವಪೂರ)ದ  ರಡ್ಡಿ ಅರಸೊತ್ತಿಗೆಯ ನಾಗರಡ್ಡಿ& ಗೌರಮ್ಮ ದಂಪತಿಗಳಿಗೆ ಜನಿಸಿದ ಮಲ್ಲಮ್ಮಅವರು  ಬಾಲ್ಯದಲ್ಲಿಯೇ ಸದಾಕಾಲ ಶ್ರೀಶೈಲ ಮಲ್ಲಿಕಾರ್ಜುನನ ಪೂಜೆ,ಜಪ, ಧ್ಯಾನಗಳಲ್ಲಿ ಮಗ್ನಳಾಗುತ್ತಿದ್ದರು.

       ನಾಗರಡ್ಡಿ ತನ್ನ ಮಗಳಿಗೆ ಪುರಾಣ, ಶಾಸ್ತ್ರ, ಪುಣ್ಯ ಕಥೆಗಳನ್ನೆಲ್ಲ ಹೇಳುತ್ತಿದ್ದರು. ಇದೇ ಸಂಸ್ಕಾರದಲ್ಲಿ ಬೆಳೆದುಬಂದ ಮಲ್ಲಮ್ಮರನ್ನು ರಡ್ಡಿ ರಾಜರಲ್ಲಿ 5ನೇ ಅರಸ ಸಿದ್ದಾಪುರದ ಕುಮಾರ ಗಿರಿವೇಮರಡ್ಡಿಯ ಪುತ್ರ ಭರಮರಡ್ಡಿಗೆ ಮದುವೆ ಮಾಡಿಕೊಡಲಾಯಿತು. ಅತೀ ಮುಗ್ಧ ಸ್ವಭಾವದ ಗಂಡ ಭರಮರಡ್ಡಿಯನ್ನು ದೇವರಂತೆ ಉಪಚರಿಸುತ್ತಿದ್ದರು. ವಿಷಲಂಟನಾಗಿದ್ದ ಮೈದುನ 'ವೇಮನ'ನನ್ನು ಮಗನಂತೆ ಕಂಡು ಪ್ರೀತಿಯಿಂದ ತಿದ್ದಿ, ಬುದ್ಧಿ ಹೇಳಿ ಮಹಾಯೋಗಿಯನ್ನಾಗಿ ಪರಿವರ್ತಿಸಿದರು.ಮುಂದೆ ಇದೇ ವೇಮನ ಸುಪ್ರಸಿದ್ಧ ಮಹಾಯೋಗಿಯಾಗಿ ಲೋಕ ಬೆಳಗಿದನು.

      ಮಲ್ಲಮ್ಮರ ಕಾರ್ಯಗಳೆಲ್ಲ ಜನಪ್ರಿಯತೆಯನ್ನು ಹೆಚ್ಚಿಸಿದವು. ಇದರಿಂದ ಎಲ್ಲೆಡೆಯಲ್ಲೂ ಮಲ್ಲಮ್ಮರ ಕೀರ್ತಿ ಬೆಳಗತೊಡಗಿತು. ಇದು ಅವರ ನೆಗೆಯಣ್ಣಿಯರಿಗೆ ಹೊಟ್ಟೆಕಿಚ್ಚು ಉಂಟಾಗುವಂತೆ ಮಾಡಿತು. ವಿವಿಧ ಬಗೆಯ ಹಿಂಸೆ ನೀಡಿ ಮಲ್ಲಮ್ಮರಿಗೆ ಮನೆಯಿಂದ ಹೊರದಬ್ಬಿದರು. ಕಾಡಿಗೆ ಹೋಗಿ ಗೋವುಗಳನ್ನು ಕಾಯುತ್ತ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನಳಾಗುತ್ತಿದ್ದರು. ಇದನ್ನೂ ಸಹಿಸದ ನಗೆಯಣ್ಣಿಯರು ಮಲ್ಲಮ್ಮ ಪರಪುರುಷನ ಸಂಗದಲ್ಲಿದ್ದಾರೆ ಎಂದು ಆರೋಪ ಹೊರಿಸಿ, ಅವರನ್ನು ಕೊಲ್ಲಲು ಗಂಡ ಭರಮರಡ್ಡಿಗೆ ತಿಳಿಸುತ್ತಾರೆ. ಆದರೆ ಅವರನ್ನು ಕೊಲ್ಲಲು ಹೋದ ಭರಮರಡ್ಡಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಪಡೆದು ತನ್ನ ಅಕ್ಕ-ತಂಗಿಯರು ಎಷ್ಟು ನೀಚರು ಎಂಬುವುದನ್ನು ತಿಳಿಯುತ್ತಾನೆ.

      ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತವನ್ನು ಬಯಸಿದರು. ಮನೆಯ ಒಡತಿಯಾಗಿದ್ದರೂ ದಾಸಿಯಂತೆ ಸೇವೆ ಸಲ್ಲಿಸಿ ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು. ಆಯುಷ್ಯ ಮುಗಿಯುವ ಸಂದರ್ಭದಲ್ಲಿ ಮಲ್ಲಮ್ಮ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಿರಬೇಕಾದರೆ, ಸ್ವಾಮಿಯು ದರ್ಶನವಿತ್ತು ಏನಾದರೂ ವರವನ್ನು ಕೇಳು ಎಂದಾಗ ಅವರು ತನ್ನ ಬಳಗಕ್ಕೆ ಎಂದಿಗೂ ಬಡತನ ಬರಬಾರದು ಎಂದು ಪ್ರಾರ್ಥಿಸಿದರು.

     ಮಲ್ಲಿಕಾರ್ಜುನನಿಂದ ವರಪಡೆದ ಮಲ್ಲಮ್ಮ, ತನ್ನ ಬಳಗವನ್ನು ಕರೆದು ಸಂಪತ್ತಿಗೆ ಸೊಕ್ಕಬೇಡಿ, ದಾನಗುಣ ಬೆಳಸಿಕೊಳ್ಳಬೇಕು ಎಂದು ಹೇಳಿದರು ಎಂಬುದಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎನ್ನುತ್ತಾರೆ ದಾರ್ಶನಿಕರು.ಅವರು ಸುಕ್ಷೇತ್ರ ಶ್ರೀಶೈಲದಲ್ಲಿ  ತಮ್ಮ ಕೊನೆ ಉಸಿರೆಳೆದರು.

       ಮಹಾಶಿವಶರಣೆಯಾಗಿ ಬೆಳಗಿದ 14ನೇ  ಶತಮಾನದ ಹೇಮರಡ್ಡಿ ಮಲ್ಲಮ್ಮ 12ನೇ ಶತಮಾನ ಶಿವಶರಣೆಯರಂತೆ ವಚನಗಳನ್ನು ರಚಿಸಲಿಲ್ಲವಾದರೂ ಅವರ ಬದುಕೇ ಒಂದು ಬೃಹತ್ ವಚನ ಸಂಪುಟದಂತಿದೆ. ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ.ಇಂತಹ ಅಮೋಘ ರತ್ನ ನಮ್ಮೆಲ್ಲರ  ಕಣ್ಣ್ಮಣಿಯಾಗಿರುವುದು,ಎಲ್ಲಾ ಜನ ಮನಗಳಲ್ಲಿ ಸಂತಸ ತರುವ ವಿಚಾರ. ಇವರ  ಜೀವನದ ಹಿರಿಮೆ ಸಾರುವ ಸಲುವಾಗಿ 1945,1973 &2008 ರಲ್ಲಿ ಕನ್ನಡ ಭಾಷೆಯಲ್ಲಿ ಚಲನಚಿತ್ರಗಳೂ ಕೂಡ ನಿರ್ಮಿಸಲ್ಪಟ್ಟಿವೆ. ಇವರ ನೆನಪಲ್ಲಿ ಶ್ರೀಶೈಲದ  ಹತ್ತಿರ ಮಂದಿರವೊಂದು  ಕಟ್ಟಿಸಲಾಗಿದೆ.

       ಇವರ ಈ ಜಯಂತಿ ನಮ್ಮೆಲ್ಲರಿಗೂ  ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಸ್ಫೂರ್ತಿ ನೀಡಲಿ ಎಂದು  ಆಶಿಸುತ್ತಾ ಎಲ್ಲರಿಗೂ ಮತ್ತೊಮ್ಮೆ ಮಹಾಸಾದ್ವಿ  ಮಲ್ಲಮ್ಮ ಅವರ ಜಯಂತಿಯ  ಹಾರ್ದಿಕ ಶುಭಾಶಯಗಳೊಂದಿಗೆ ನನ್ನ ಮಾತುಗಳಿಗೆ ವಿರಾಮ  ನೀಡುತ್ತಿದ್ದೇನೆ.

No comments:

Post a Comment