Tuesday, 20 January 2015

ABOUT- AMBIGARA CHOUDAIAH

Ambigara  chowdayya.

ಅಂಬಿಗರ ಚೌಡಯ್ಯ ೧೨ ನೇ ಶತಮಾನದ ಬಸವಣ್ಣನ  ಸಮಕಾಲೀನ ಶರಣ. ಆತ ನದಿಯಲ್ಲಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದ. ಈತ ೨೭೯ ವಚನಗಳನ್ನು "ಅಂಬಿಗರ ಚೌಡಯ್ಯ" ಎಂಬ ತನ್ನ ಹೆಸರಿನ ಅಂಕಿತದಲ್ಲೇ ರಚಿಸಿರುವುದು ಒಂದು ವಿಶೇಷ.

 ಹಿನ್ನೆ ಲೆ :-
ಅಂಬಿಗರ ಚೌಡಯ್ಯ ವಚನಗಳನ್ನು ಓದಿದವರಿಗೆ ಚೌಡಯ್ಯ ಒಬ್ಬ ಪ್ರಾಮಾಣಿಕ  ಹೋರಾಟಗಾರ , ನಿರ್ಭಿಡೆಯ ಮನುಷ್ಯ. ,ದುಡಿವ ವರ್ಗದವರ ದನಿಯಾಗಿ ವಚನಕಾರರಲ್ಲಿ  ವಿಶಿಷ್ಟಸ್ಥಾನ ಪಡೆದಾತ. ವಚನಕಾರರಲ್ಲಿ ಬಸವಣ್ಣ, ಅಕ್ಕಮಹಾದೇವಿ, ಚೆನ್ನ ಬಸವಣ್ಣ, ಅಲ್ಲಮಪ್ರಭು, ಸಿದ್ದರಾಮ ಇವರ ಬಗೆಗೆ ಹೆಚ್ಚು ಅಧ್ಯಯನ - ಸಾಹಿತ್ಯ ಸಮೀಕ್ಷೆ ನಡೆದಿವೆ, ಆದರೆ ಚೌಡಯ್ಯ - ಕಾಳವ್ವೆ - ಉರಿಲಿಂಗಪೆದ್ದಿ ಈ ಮೊದಲಾದ ಶೂದ್ರ ವಚನಕಾರರ ಬಗೆಗೆ ಹೆಚ್ಚಿನ ಅಧ್ಯಯನ, ವಿಮರ್ಶೆ ಆಗಿಲ್ಲ. ವಚನ ಚಳುವಳಿಯ ಮೂಲ ಪ್ರೇರಣೆಗೆ ಬಸವಣ್ಣ ಕಾರಣವಾದರೆ ಆ ಚಳುವಳಿಯನ್ನು ಜೀವಂತಗೊಳಿಸಿದವರು ಚೌಡಯ್ಯ  ಮೊದಲಾದ ದುಡಿವ ವರ್ಗದಿಂದ ಬಂದ ವಚನಕಾರರು. ಈ ಅಂಶವನ್ನು ಚರಿತ್ರೆ ಮರೆಯಲಾರದು. ಚೌಡಯ್ಯನ ನೇರ ಹಾಗೂ ನಿರ್ಭೀಡೆಯ ನುಡಿಗಳು ಭಕ್ತಿಯ ಅಮಲಿನ ಭಾವುಕರಿಗೆ ಕಟು ಎಂದೆನಿಸಿದರೂ ಅಲ್ಲಿ ದಟ್ಟ ಸತ್ಯವಡಗಿದೆ, ಪ್ರಾಮಾಣಿಕ ಅನುಭವವಿದೆ. ಇದನ್ನೆಲ್ಲಾ ಅರ್ಥೈಸಿಕೊಂಡಾಗ ವಚನಕಾರರ ಪ್ರಾಮುಖ್ಯತೆ ತಿಳಿಯುತ್ತದೆ. ಈ ದಿಸೆಯಲ್ಲಿ ಅಂಬಿಗರ ಚೌಡಯ್ಯನವರು ಗಮನಾರ್ಹರು.

ಚೌಡಯ್ಯನ ದೃಷ್ಟಿಯಲ್ಲಿ ಧರ್ಮ - ದೇವರು :                 ಚೌಡಯ್ಯ ಮೊದಲಾದ ವಚನಕಾರರು ಧರ್ಮದ ವ್ಯಾಖ್ಯೆಯನ್ನು ಸರಳಗೊಳಿಸಿದರು. ನರನಲ್ಲೇ ಹರನನ್ನು ; ವ್ಯಕ್ತಿಯಲ್ಲೇ ಶಕ್ತಿಯನ್ನು ಗುರುತಿಸುವದರ ಮೂಲಕ ದೇವರ ಕಲ್ಪನೆಯನ್ನೇ ಬದಲಾಯಿಸಿದರು. ವೀರಶೈವ ಧರ್ಮವನ್ನೇ ಅವರು ಆರಿಸಿಕೊಂಡರೂ ಅದಕ್ಕೊಂದು ಹೊಸ ತಿರುವು ತಂದುಕೊಟ್ಟರು. ಹುಟ್ಟಿನಿಂದ ಲಿಂಗಾಯತರಾಗಿದ್ದ ಮಾತ್ರ ವೀರಶೈವರು ಎಂಬ ಹಳೆಯ ವಿಚಾರವನ್ನು ಬಿಟ್ಟು; ಅಲ್ಲಿದ್ದ ಸಂಪ್ರದಾಯವನ್ನು ಅಲ್ಲಗಳೆದು ಹುಟ್ಟಿನಿಂದ ಯಾವದೇ ಮತದವರಾಗಿದ್ದರೂ ಆಚಾರ, ವಿಚಾರದಿಂದ ಲಿಂಗಾಯತರಾದವರನ್ನು ಶರಣರು ವೀರಶೈವರೆಂದು ಕರೆಯುವದರ ಮೂಲಕ ವೀರಶೈವ ಧರ್ಮದ ವ್ಯಾಪ್ತಿಯನ್ನು ಹೆಚ್ಚಿಸಿದರು.                 ಚೌಡಯ್ಯನವರು ಇಂತಹ ವಿಷಯದಲ್ಲಿ ಬಹಳ ನಿರ್ಭಿಡೆ ವ್ಯಕ್ತಿ.
"ಕಟ್ಟಿದ ಲಿಂಗವನ್ನು ಬಿಟ್ಟು  ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಮೆಟ್ಟು ತೆಗೆದುಕೊಂಡು ಹೊಡೆಯೆಂದು" ಖಾರವಾಗಿ ಹೇಳುತ್ತಾರೆ. ಧರ್ಮನಿಷ್ಟೆ ಚೌಡಯ್ಯನವರಲ್ಲಿ ಗಾಢವಾಗಿತ್ತು. ಅವರ ವಿಚಾರಧಾರೆ ಬೆಳೆದಂತೆಲ್ಲಾ ಅದು ಇನ್ನೂ ವಿಶಾಲವಾಗುತ್ತ ಹೋಯಿತು. ಆದ್ದರಿಂದಲೇ ಅವರು ಹಿಂದಿದ್ದ ಧರ್ಮಗಳಲ್ಲಿಯ ಪೊಳ್ಳುತನವನ್ನು ಬಯಲುಮಾಡಿ ಅಖಂಡವಾದ ಮಾನವ ಧರ್ಮದ ಕಡೆ ಕರೆದೊಯ್ದರು.ಚೌಡಯ್ಯ  ಮೊದಲಾದ ವಚನಕಾರರು ಮೂರ್ತಿ ಪೂಜಕರಲ್ಲ. ಹಾಗೆಂದಾಕ್ಷಣ ಅವರು ನಿರಾಕಾರವನ್ನೂ ಪೂಜಿಸುವುದಿಲ್ಲ. ಪರಮಾತ್ಮನ ಆಕಾರವನ್ನೇ ಜೀವಾತ್ಮನಲ್ಲಿ ಗುರುತಿಸಿ ಇಷ್ಟಲಿಂಗದ ಕುರುಹಿನ ಮೂಲಕ ಅರಿವು ಕಂಡುಕೊಳ್ಳುವದು ಮುಖ್ಯ ಉದ್ದೇಶ .

No comments:

Post a Comment