Saturday, 31 October 2015

Kannada Rajyotsav Special

64 ನೇ  ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡ ರಾಜ್ಯೋತ್ಸವ: ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. *ಇತಿಹಾಸ: ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. ೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ್ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಟಯ್ಯ ಮುಂತಾದವರು. *ಆಚರಣೆಗಳು: ರಾಜ್ಯೋತ್ಸವ ದಿನ ಎಲ್ಲಾ ಕರ್ನಾಟಕ ರಾಜ್ಯದ ಮಹನ್ ಆನಂದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ರಾಜ್ಯಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗುತ್ತದೆ. ಸರಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ. ಕರ್ನಾಟಕದಲ್ಲಿನ ಇನ್ನಿತರ ಪ್ರದೇಶಗಳಾದ ಮುಂಬೈ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ. *ಆಚರಣೆಯ ತಿಂಗಳು: ನವೆಂಬರ್ ೧೧ ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್ ೧ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕನ್ನಡ ಬಾವುಟ ಸರ್ಕಾರದ ಪ್ರಮುಖ ಕಛೇರಿಯ ಮೇಲೆ ಎಲ್ಲೆಲ್ಲಿಯೂ ಹಾರಾಡುತ್ತಿರುತ್ತದೆ.

🍃🌹 *ಕನ್ನಡ ರಾಜ್ಯೋತ್ಸವದ ಶುಭಾಶಯಗಳು*🌹🍃

**ಕನ್ನಡ ರಾಜ್ಯೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿ***

    ಕನ್ನಡ ರಾಜ್ಯೋತ್ಸವ.ಇದು ಕನ್ನಡಾಂಬೆಯ ಮಹೋತ್ಸವ. ಕನ್ನಡ ನಾಡು ನುಡಿಯ ವೈಭವವು ವೈಶಿಷ್ಠಪೂರ್ಣವಾದುದು.
ಇದು ನಾವು ಶ್ರೀಗಂಧದ ಬೀಡು, ಶಿಲ್ಪಕಲೆಯ ತವರೂರು, ಸಂಸ್ಕ್ರತಿಯ ನೆಲೆವೀಡು, ಹಚ್ಚ ಹಸುರಿನ ಸುಂದರ ಬೆಟ್ಟಗಳ, ಪವಿತ್ರ ನದಿಗಳ ನಾಡು, ಕರುನಾಡು ಎಂದು ಕರೆಯಲ್ಪಡುವ ಕರ್ನಾಟಕದ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ, ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಿಸುತ್ತಿದ್ದೇವೆ.

       ಕನ್ನಡ ನುಡಿಯು 2000 ವರ್ಷಗಳ ಇತಿಹಾಸವನ್ನು ಹೊಂದಿದೆ.ಕದಂಬರ ಕಾಲದ ಹಲ್ಮಿಡಿ ಶಾಸನದಲ್ಲಿ  ಹುಟ್ಟಿ, ರಾಷ್ಟ್ರಕೂಟರ ಕಾಲದ ಕವಿರಾಜ ಮಾರ್ಗದಲ್ಲಿ ಬೆಳೆದು,
ರನ್ನ- ಪಂಪರಿಂದ ಪೋಷಿಸಲ್ಪಟ್ಟು, ಪೂರ್ವದ ಹಳಗನ್ನಡ - ನಡುಗನ್ನಡ - ಹೊಸಗನ್ನಡವಾಗಿ ರೂಪಾಂತರಗೊಂಡು, ಸಂವಿಧಾನದಲ್ಲಿ ಲಿಖಿತಗೊಂಡ 18 ಭಾಷೆಗಳಲ್ಲಿಯೇ ಕನ್ನಡ ಭಾಷೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ವಿಶಾಲ ಸಮೃದ್ಧ ಸಾಹಿತ್ಯವಾಗಿ ಬೆಳೆದು ನಿಂತಿದೆ.

      ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಕಡಲತೀರದ ಭಾರ್ಗವ ಶಿವರಾಮ ಕಾರಂತ, ಕನ್ನಡದ ಆಸ್ತಿ ಮಾಸ್ತಿ, ಭಾರತ ಸಿಂಧೂ ರಶ್ಮಿಯ ವಿ.ಕೃ. ಗೋಕಾಕ್, ಸಮಗ್ರ ಸಾಹಿತ್ಯದ ಅನಂತಮೂರ್ತಿ, ನಾಟಕಕಾರ ಗಿರೀಶ್ ಕಾರ್ನಾಡು ಹಾಗೂ ಚಂದ್ರಶೇಖರ ಕಂಬಾರರಿಂದ ಕನ್ನಡ ನುಡಿ ಪ್ರಜ್ವಲಿಸಿದೆ.

      ರನ್ನ ಪಂಪ ಜನಿಸಿದ ಪುಣ್ಯಬೀಡು ಈ ಕರ್ನಾಟಕ, ಹೊಯ್ಸಳ, ಚಾಲುಕ್ಯ, ಕದಂಬರು ಆಳಿದ ತ್ಯಾಗ ಭೂಮಿ 
ಈ ಕರ್ನಾಟಕ. ಈ ಮಣ್ಣಿನಲ್ಲಿ ಪ್ರೀತಿ ಇದೆ.ತ್ಯಾಗವಿದೆ, ಪರೋಪಕಾರ ಗುಣವಿದೆ, ಧೈರ್ಯವಿದೆ, ಶೌರ್ಯವಿದೆ, ಕರುಣಿಯಿದೆ. ಇಂತಹ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯಶಾಲಿಗಳು.

      ಕರುನಾಡನ್ನು ಹಲವು ಸಾಮ್ರಾಜ್ಯಗಳು ಹಾಗೂ ರಾಜ ವಂಶದವರು ಆಳಿದ್ದಾರೆ. ಕನ್ನಡದ ಮೊದಲ ರಾಜವಂಶವಾದ  ಬನವಾಸಿಯ ಕದಂಬರು, ಶಿಲ್ಪಕಲೆಯನ್ನು ಹುಟ್ಟುಹಾಕಿದ ಹೊಯ್ಸಳರು, ತಲಕಾಡಿನ ಗಂಗರು, ಚರಿತ್ರೆಯ ಪುಟಗಳಲ್ಲಿ ಸುವರ್ಣ ಯುಗವನ್ನು ಬರೆದು ಹೋಗಿರುವ ವಿಜಯನಗರ ಸಾಮ್ರಾಜ್ಯದ ಅರಸರು ಕನ್ನಡದ ವೈಭವೋಪಿತ ಇತಿಹಾಸಕ್ಕೆ ಮತ್ತು ಶ್ರೀಮಂತ ಶಿಲ್ಪಕಲೆಗೆ, ಸಾಹಿತ್ಯಕ್ಕೆ, ಸಂಸ್ಕ್ರತಿಯ ಹುಟ್ಟು ಹಾಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

        ಕರ್ನಾಟಕದ ಹುಟ್ಟಿನ ಬಗ್ಗೆ ತಿಳಿಯುವುದಾದರೆ  1905 ರಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಟರಾವ್ ರವರು ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಿಸಿದರೆ ಜೊತೆಗೂಡಿ ಹೋರಾಡಿದರು ಕೋಟಿ ಕೋಟಿ ಕನ್ನಡಿಗರು.

       1950 ರಲ್ಲಿ ಭಾರತವು ಗಣರಾಜ್ಯವಾಗಿ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರೂಪುಗೊಂಡವು. ಮದ್ರಾಸ್, ಮುಂಬಯಿ ಹೈದರಾಬಾದ್.. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ 1956 ನವಂಬರ್ 1 ರಂದು ಏಕೀಕೃತ ಕನ್ನಡ ನಾಡು ಮೈಸೂರು ರಾಜ್ಯ ಎಂಬ ಅಭಿದಾನದೊಂದಿಗೆ ಉದಯವಾಯಿತು. 

        1956ರಲ್ಲಿ ಡಾ: ಬಾಬು ರಾಜೇಂದ್ರ ಪ್ರಸಾದ್ ರವರಿಂದ ಉದ್ಘಾಟನೆಗೊಂಡ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾಗಿ ಎಸ್.ನಿಜಲಿಂಗಪ್ಪನವರು ಹಾಗೂ ರಾಜ್ಯಪಾಲರಾಗಿ ಜಯಚಾಮ ರಾಜೇಂದ್ರ ಒಡೆಯರು ಆಯ್ಕೆಯಾದರು.
       
          ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಏಕೀಕರಣ ಚಳುವಳಿಯ ಹೋರಾಟಗಾರರು ಕನ್ನಡ ಸಾಹಿತಿಗಳು ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳ ಆಶಯದಂತೆ ದೇವರಾಜು ಅರಸರ ಕಾಲದಲ್ಲಿ 1973 ನವಂಬರ್ 1 ರಂದು ಮೈಸೂರು ರಾಜ್ಯ ಕರ್ನಾಟಕ ಎಂಬ ಅಭಿದಾನ ಪಡೆಯಿತು. ಅಂದಿನಿಂದ ಪ್ರತಿ ವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ನಾಡು ನುಡಿಗೆ ಗೌರವ ಸಲ್ಲಿಸುತ್ತಿದ್ದೇವೆ.

         ಕರ್ನಾಟಕ ಪದದ ಮೂಲವೂ ಸಾಮಾನ್ಯವಾಗಿ ಕರು ಮತ್ತು ನಾಡು ಸೇರಿ 'ಎತ್ತರದ ಭೂಮಿ' ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ.
       *ಕರು* ಎಂದರೆ ಕಪ್ಪು , 'ನಾಡು' ಎಂದರೆ ಪ್ರದೇಶ ಅಂದರೇ, ಬಯಲು ಸೀಮೆಯ ಕಡು ಕಪ್ಪುಹತ್ತಿ ಮಣ್ಣಿನಿಂದಾಗಿ ಕರ್ನಾಟಕ ಎಂಬ ಹೆಸರು ಬಂದಿದೆ.

      ಕೃಷ್ಣ ನದಿಯ ದಕ್ಷಿಣಕ್ಕೆ ಎರಡು ಕಡೆ ಜಲಾವೃತವಾದ ಪ್ರದೇಶವಾದುದರಿಂದ ಬ್ರಿಟಿಷರ ಕಾಲದಲ್ಲಿ ಕರ್ನಾಟಿಕ್ ಅಥವಾ ಕರ್ನಾಟಕ ಎಂದು ಹೆಸರು ಬಳಕೆ ಬಂದಿತು.

       ಕರ್ನಾಟಕ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಬಣ್ಣದ ಕನ್ನಡ ಧ್ವಜವು ಕನ್ನಡ ನಾಡಿನ ಹಿರಿಮೆ ಗರಿಮೆಯ ಸಂಕೇತವಾಗಿದೆ. ಹಳದಿ ಬಣ್ಣವು ಕನ್ನಡಾಂಬೆಯ ಅರಿಷಿನ ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ ಸೌಹಾರ್ದತೆಯನ್ನು ಸೂಚಿಸಿದರೆ ಕೆಂಪು ಬಣ್ಣವು ಕ್ರಾಂತಿಯ ಸಂದೇಶ ನೀಡುತ್ತದೆ ಅಂದರೆ ಕನ್ನಡಿಗರು ಕ್ರಾಂತಿಗೂ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶ ನೀಡುತ್ತದೆ.

        ಕನ್ನಡ ಬಾವುಟವನ್ನು ಕನ್ನಡ ಹೋರಾಟಗಾರರಾದ 
ಎಂ. ರಾಮಮೂರ್ತಿಯವರು ಸಿದ್ಧಪಡಿಸಿದರು. ಕನ್ನಡ ಬಾವುಟ ಯಾವುದೇ ಅಧಿಕೃತ ಸ್ಥಾನಮಾನ ಹೊಂದಿಲ್ಲ. ಆದರೆ ಧ್ವಜವನ್ನು ಕರ್ನಾಟಕದ ಎಲ್ಲೆಡೇ ಸ್ಥಿರವಾಗಿ ಕರ್ನಾಟಕ ಹಾಗೂ ಕನ್ನಡ ಪ್ರತಿನಿಧಿಸಲು ಬಳಸುತ್ತಾರೆ. ಈ ರಾಜ್ಯೋತ್ಸವದಂದು ಎಲ್ಲಾ ರೀತಿಯ ವಾಹನಗಳ ಮೇಲೂ ಕನ್ನಡ ಬಾವುಟ ರಾರಾಜಿಸುತ್ತದೆ.

       ಕರ್ನಾಟಕ ಮಾತೃಭಾಷೆ ಕನ್ನಡವೇ ಆದರೂ ಅದರಲ್ಲಿ ಹಲವು ವಿಶೇಷತೆಗಳನ್ನು ಕಾಣಬಹುದು. ಬೆಂಗಳೂರಿನ ಕಂಗ್ಲೀಷ್ ಕನ್ನಡ, ಮೈಸೂರಿನ ಮೆಲುಧನಿ ಕನ್ನಡ, ದಾರವಾಡದ ಗಂಡು ಕನ್ನಡ , ದಕ್ಷಿಣದ ಗ್ರಾಂಥಿಕ ಕನ್ನಡ, ಕಾಸರಗೂಡಿನ ಮಲೆಯಾಳಮ್ ಕನ್ನಡ, ಹೈದರಾಬಾದ್ ಕರ್ನಾಟಕದ  ಉರ್ದು ಮಿಶ್ರಿತ ಕನ್ನಡ ಮುಂತಾದವು.

         ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ.

     *** ಕನ್ನಡದ ಬಗ್ಗೆ ಕವಿವಾಣಿಗಳು ***
 *ಕುವೆಂಪು*:
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು . ಕನ್ನಡಕ್ಕಾಗಿ ಕೊರಳೆತ್ತಿದರೆ ಅದು ಪಾಂಚಜನ್ಯವಾಗುವುದು. ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ ಅದು ಗೋವರ್ಧನಗಿರಿಯಾಗುವುದು.
     * ಎಲ್ಲದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೇ ನೀ ನಮಗೆ ಕಲ್ಪತರು.


** ಜಿ.ಪಿ. ರಾಜರತ್ನಂ**
       ಹೆಂಡ ಹೋಗ್ಲಿ, ಹೆಂಡ್ತಿ ಹೋಗಿ, ಎಲ್ಲಾ ಕೊಚ್ಕೊಂಡು ಹೋಗಲಿ, ಪರ್ ಪಂಚ ಇರೋತನಕ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ.

*ಮಹಲಿಂಗರಂಗ *
ಸುಲಿದ ಬಾಳೆಯ ಹಣ್ಣಿನಂದದಿ , ಕಳಿದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಸುಲಭವಾಗಿರ್ಪ ,
ಲಲಿತವಹ ಕನ್ನಡದ ನುಡಿಯಲ್ಲಿ , 
ತಿಳಿದ ತನ್ನೋಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ ಸಂಸ್ಕ್ರತದಲ್ಲಿನ್ನೇನಿದೆ.

*ಡಿ.ಎಸ್. ಕರ್ಕಿ*
ಹಚ್ಚೇವು ಕನ್ನಡದ ದೀಪ .
ಕರುನಾಡ ದೀಪ.
ಸಿರಿನುಡಿಯ ದೀಪ .
ಒಲವೆತ್ತಿ ತೋರುವ ದೀಪ.
**ಕನ್ನಡದ ರವಿಮೂಡಿ ಬಂದ .
ಮುನ್ನಡೆವ ಬೆಳಕನ್ನೇ ತಂದ.
ರಾಜ್ಯೋತ್ಸವ , ನಮ್ಮ ರಾಜ್ಯೋತ್ಸವ.
 **ನಾವಾಡುವ ನುಡಿಯೇ ಕನ್ನಡ ನುಡಿ. ನಾವಿರುವ ತಾಣವೇ ಗಂಧದ ಗುಡಿ .
    ** ಕನ್ನಡ ಹೊನ್ನುಡಿ ದೇವಿಯನು ಪೂಜಿಸುವೆ , ನಾ ಆರಾಧಿಸುವೆ .
     ಇಂತಹ ಅರ್ಥಪೂರ್ಣ ಕನ್ನಡ ಮಾಧುರ್ಯ ಗೀತೆಗಳನ್ನು ರಚಿಸಿದ ಹಾಗೂ ರಚಿಸುವಂತಹ ಕವಿಗಳು ಕೋಟಿ ಕೋಟಿ ಉದಯಿಸಲಿ. ನಾವೆಲ್ಲಾ ಅವುಗಳನ್ನು ಸಂಭ್ರಮದಿಂದ ಹಾಡೋಣ.
      ** ಸತ್ತಂತಿಹರನು ಬಡಿದೆಚ್ಚರಿಸು.
ಕಚ್ಚಾಡುವವರನು ಕೂಡಿಸಿ ಒಲಿಸು, ಎಂಬ ಕವಿವಾಣಿಯ ಆಶಯದಂತೆ ಕಾರ್ಯ ಪ್ರವೃತ್ತರಾಗೋಣ.
ಕನ್ನಡ ಉಳಿಸಿ ಬೆಳೆಸೋಣ.
        * ಕನ್ನಡ ನಾಡಿನಲ್ಲಿ ಕನ್ನಡ ಕಣ್ಮರೆಯಾಗುತಿರುವುದು ವಿಷಾದದ ಸಂಗತಿಯಾಗಿದೆ.
ಕನ್ನಡದ ಸೊಬಗಿನ ಸೀಮೆ , ಕೊಡಗಿನ ಪ್ರತ್ಯೇಕತೆ, ಬೆಳಗಾಂ ಮಹಾರಾಷ್ಟ್ರಕ್ಕೆ ಸೇರ್ಪಡೆ, ಹೈದರಾಬಾದ್ ಕರ್ನಾಟಕದ ಪ್ರತ್ಯೇಕತೆಯ ಕೂಗುಗಳು ಕೇಳಿ ಬರುತ್ತಿವೆ. ಇದರಿಂದಾಗಿ ಕನ್ನಡ ನಾಡು ಹರಿದು ಹೋಗುತ್ತದೆ. 
      ಹಾಗಾಗಿ ನಾವೆಲ್ಲಾ ಅಖಂಡ ಕರ್ನಾಟಕದ ಉಳಿವಿಗಾಗಿ ಹೋರಾಡಬೇಕು. ಈಗಾಗಲೇ ನಮ್ಮ ಕನ್ನಡ ನೆಲ ಜಲವನ್ನು ಕಳೆದುಕೊಂಡಿದ್ದೇವೆ. ಮುಂದೆ ಭಾಷೆಯನ್ನು ಕಳೆದುಕೊಳ್ಳುವ ಆತಂಕ ಬರುವುದು ಬೇಡ ಕನ್ನಡ ಭಾಷೆ ಈ ನಾಡು ಸಮಸ್ತ ಕನ್ನಡಿಗರ ಆಸ್ತಿ.
        * ಕನ್ನಡ ನಾಡು ನುಡಿಯ ಅಭಿಯಾನ ಇಂದಿನ ಜನತೆಯ ನರ ನರಗಳಲಿ ಮಿಡಿಯುವಂತಾಗಲಿ ಎಂದು ಶಾಂತದೇವಿ ಮಾಳವಾಡ ಅಭಿಪ್ರಾಯ ಪಟ್ಟಿದ್ದಾರೆ. 
         * ಕನ್ನಡ ಭಾಷೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಭಾಷಾಭಿಮಾನ, ಭಾಷೆಯ ಬಗ್ಗೆ ಅಪಾರವಾದ ಜ್ಞಾನ, ಭಾಷೆಯನ್ನು ಶ್ರೀಮಂತಗೊಳಿಸುವ, ಮುನ್ನಡೆವ ಇಚ್ಚಾ ಶಕ್ತಿ ಬೇಕು. ಅನ್ಯಭಾಷಿಗರಿಗೆ ಕನ್ನಡ ಕಲಿಸೋಣ. 
     ** ಕನ್ನಡಿಗರೆಲ್ಲರೂ ಕನ್ನಡ ಭಾಷೆಯನ್ನು ಹೆಬ್ಬಾಗಿಲಿನಂತೆ ಬಳಸಿ   ಇತರ ಭಾಷೆಗಳನ್ನು... ಗಾಳಿ, ಬೆಳಕಿಗೆ ಬೇಕಾದ ಕಿಟಕಿಗಳಂತೆ ಉಪಯೋಗಿಸಬೇಕು. ಅದರಲ್ಲಿರುವ ಉತ್ತಮಾಂಶಗಳನ್ನು ನಾವು ಸ್ವೀಕರಿಸಬೇಕು.
     * ಮಗು ಭಾಷೆಯನ್ನು ಅನುಕರಣೆಯ ಮೂಲಕ ಕಲಿಯುತ್ತದೆ. ಆದುದರಿಂದ ಮಗುವಿಗೆ ಮೊದಲು ಮಾತೃಭಾಷೆಯ ಮೂಲಕ ಶಿಕ್ಷಣ ಕೊಡಬೇಕು. ಅಗತ್ಯವಿದ್ದರೆ ಪರಭಾಷೆಯನ್ನು ಕಲಿಸಬೇಕು .ಭಾಷೆ ಮಕ್ಕಳ ಸರ್ವಾಂಗೀಣ ಸಾಧನೆಯಾಗಬೇಕು.  
** ಮನೆಯೇ ಮೊದಲ ಪಾಠಶಾಲೆ. ಇಲ್ಲಿಂದಲೇ ಮಕ್ಕಳಿಗೆ ಮಾತೃಭಾಷಾ ಕಲಿಕೆ ಮತ್ತು ಭಾಷಾಭಿಮಾನ ಬೆಳಸುವುದು ಮುಖ್ಯವಾಗುತ್ತದೆ. ಮಕ್ಕಳಿಗೆ ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಪಡುವಂತಹ ಕಲಿಕೆಯನ್ನು ಪ್ರೋತ್ಸಾಹಿಸಬೇಕು.ಕನ್ನಡ ಕಲಿಕೆಯನ್ನು ಒತ್ತಾಯವಾಗಿ ಹೇರುವ ಪರಿಸ್ಥಿತಿ ಬದಲಾಗಿ ಕನ್ನಡ ಭಾಷೆ ನಮ್ಮ ತಾಯಿ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂಬ ಭಾವಾನಾತ್ಮಕ ಅಂಶಗಳನ್ನು ಭಿತ್ತುವ ಕಾರ್ಯ ಮಾಡಬೇಕು. ಈ ಕಾಯಕದಲ್ಲಿ ಪ್ರತಿಯೊಬ್ಬ ಕನ್ನಡಿಗನು ಕಂಕಣ ಬದ್ಧವಾಗಿ ಕಾರ್ಯನಿರ್ವಹಿಸಿದರೆ ಕನ್ನಡಿಗರಷ್ಟೆ ಅಲ್ಲದೆ ಇತರರು ನಮ್ಮ ಕನ್ನಡ ಭಾಷೆಯನ್ನು ಪ್ರೀತಿಸಿ ಅವರು ಅಳವಡಿಸಿಕೊಳ್ಳಲು ಪ್ರಯತ್ನಿಸುವರು. 
      * ಇಂದು ಕನ್ನಡದ ಅಭಿವೃದ್ಧಿಯು ಕೇವಲ ನವಂಬರ್ ತಿಂಗಳಲ್ಲಿ ನಡಿದರೆ ಸಾಲದು . ಸಾಮಾನ್ಯ ಪ್ರಜೆಯಿಂದ ಹಿಡಿದು... ವಿಧಾನಸೌಧದವರೆಗೂ ವರ್ಷದಾದ್ಯಂತ ನಡೆಯಬೇಕು. ರಾಷ್ಟ್ರೀಯ ಐಕ್ಯತೆಗೆ ಭಂಗ ಬರದಂತೆ ಕನ್ನಡ ರಾಜ್ಯೋತ್ಸವ ಆಚರಿಸೋಣ. ಅದಕ್ಕಾಗಿ ಕಂಕಣ ಬದ್ಧರಾಗಿ ನಿಲ್ಲೋಣ .
  * ರಾಷ್ಟ್ರಕವಿ ಕುವೆಂಪುರವರು ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಹಾಡಿ ಹೊಗಳಿದ್ದಾರೆ. ಭಾರತಾಂಬೆ ತಾಯಿಯಾದರೆ ಕನ್ನಡಾಂಬೆ ಮಗಳಾಗಿದ್ದಾರೆ. ಅಮ್ಮ ಮಗಳ ಸಂಬಂಧಕ್ಕೆ ಯಾವುದೇ ತೊಡಕಾಗದಂತೆ ನಾವು ನಮ್ಮ ಹೆಜ್ಜೆಯಿಡಬೇಕು.
         * ಗಡಿನಾಡೆ ಇರಲಿ ...
ನಡುನಾಡೆ ಇರಲಿ...
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಸಾಧ್ಯವೋ ಅಲ್ಲೆಲ್ಲಾ ..
ಕನ್ನಡದ ಪರಿಮಳದ ಪರಿಮಳವನ್ನು ಚೆಲ್ಲೋಣ. ಕನ್ನಡದ ಕೀರ್ತಿ ಪತಾಕೆ ಹಾರಿಸೋಣ.
       * ಎಲ್ಲದರೂ ಇರು ಎಂತಾದರೂ ಎಂದೆಂದಿಗೂ ನೀ ಕನ್ನಡವಾಗಿರು ...
      *ಎಲ್ಲೆಡೆ ಮೊಳಗಲಿ ..ಕನ್ನಡದ ನಾದ..ಕನ್ನಡ ಪದ .
    * ಕನ್ನಡವೇ ಸತ್ಯ.
     ಕನ್ನಡವೇ ನಿತ್ಯ.
* ಸಿರಿಗನ್ನಡಂ ಗೆಲ್ಗೆ.
ಸಿರಿಗನ್ನಡಂ ಬಾಳ್ಗೆ .

 * ಸರ್ವರಿಗೂ  ರಾಜ್ಯೋತ್ಸವದ ಶುಭಾಶಯಗಳು*

 Msg Collected By: Deepak.S.G (GKLIGHTS).

No comments:

Post a Comment