Sunday, 1 October 2017

MAHATMA GANDHI JAYANTI 2024

#ಮಹಾತ್ಮ ಗಾಂಧಿ ಜನ್ಮ ದಿನಾಚರಣೆ#

      *ಪ್ರತಿವರ್ಷ ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.*

       *ಈ ಅಕ್ಟೋಬರ್ 2, 2024 ರಂದು ನಾವೆಲ್ಲಾ ಗಾಂಧೀಜಿಯವರ 155 ನೇಯ ಹುಟ್ಟುಹಬ್ಬ ಆಚರಿಸಲಿದ್ದೇವೆ/ಆಚರಿಸುತ್ತಿದ್ದೇವೆ.

     *ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಇಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಇದರ ಜೊತೆಗೆ ಇಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಕಾರಣ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇಧಿಸಿರುವುದು ಹೆಮ್ಮೆಯ ಸಂಗತಿಯು ಹೌದು.

    * ನಮಗೆಲ್ಲಾ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು. ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ.ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13ನೇಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ . 19ನೇಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿ ಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ 2 ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು.ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಸಹ ಅವರನ್ನು ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕನ್ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು.ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ.ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು.1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ದಂಡಿ ಯಾತ್ರೆ ಕೂಡ ಒಂದು. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.'ಭಾರತ ಬಿಟ್ಟು ತೊಲಗಿರಿ'/ 'ಕ್ವಿಟ್ ಇಂಡಿಯಾ' ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿದರು.

     *ಸತ್ಯ ಮತ್ತು ಅಹಿಂಸೆ ಅವರ ಮುಖ್ಯ ತತ್ವಗಳು ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೇಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಇವರು 'ತರುಣ ಭಾರತ' (YOUNG INDIA) ಎನ್ನುವ ಆಂಗ್ಲಭಾಷಾ ವಾರಪತ್ರಿಕೆಯನ್ನು (1919 ರಿಂದ 1931 ರವರೆಗೆ)ಹೊರಡಿಸುತ್ತಿದ್ದರು. 'ಸತ್ಯದೊಂದಿಗೆ ನನ್ನ ಪ್ರಯೋಗಗಳು' (Experiments With My Truth) ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಮಹಾತ್ಮ ಗಾಂಧಿ ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು.

** ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.ಅವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ ಕೂಡ ಅವರ ಆದರ್ಶಗಳು ನಮ್ಮೆಲ್ಲರ ಮನಗಳಲ್ಲಿ ರಾರಾಜಿಸುತ್ತಿರುತ್ತವೆ. ಇಂತಹ ಅಪೂರ್ವ ಚೇತನರನ್ನು ಇಂದು ಪೂಜಿಸುವ ಮೂಲಕ ನಾವೆಲ್ಲಾ ಅವರ ಉತ್ತಮ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸೋಣ.ಧನ್ಯತೆ ಮೆರೆಯೋಣ.

* ರಘುಪತಿ ರಾಘವ ರಾಜರಾಮ್...
  ಪತಿತ ಪಾವನ ಸೀತಾರಾಮ್....
  ಈಶ್ವರ್ ಅಲ್ಲಾ ತೇರೆ ನಾಮ್
  ಸಬಕೋ ಸನ್ಮತಿ ದೇ ಭಗವಾನ್......

#Message By:
Deepak.S.Ganachari.
Admission of TEAM 'GKLIGHTS'.
CRP BILWAR.TQ JEWARGI.

No comments:

Post a Comment