Thursday, 23 April 2015

ವಿಶ್ವ ಪುಸ್ತಕ ದಿನದ ಕುರಿತು ಒಂದು ಲೇಖನ

ಇಂದು (23 ಏಪ್ರೀಲ್ 2015) ವಿಶ್ವ ಪುಸ್ತಕ ದಿನ!

ಪುಸ್ತಕ ಎಂದಾಕ್ಷಣ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಹೇಳಿದ ಅದ್ಭುತ ಮಾತು ನೆನಪಿಗೆ ಬರುತ್ತದೆ. ಅದೇನೆಂದರೆ, " ಈ ಜಗತ್ತು ಕಂಡಿರುವ ಮನುಷ್ಯ ನಿರ್ಮಾಣದ ಅತ್ಯಂತ ಗಮನಾರ್ಹ ಸೃಷ್ಟಿಯೆಂದರೆ ಪುಸ್ತಕಗಳು. ಏನು ಅಳಿದರೂ ಪುಸ್ತಕಗಳು ಬದುಕಿ ಉಳಿದಿರುತ್ತವೆ. ಮನುಷ್ಯ ಕಟ್ಟಿರುವುದು ಯಾವುದೂ ಸ್ಥಿರವಾಗಿ ನಿಲ್ಲುವುದಿಲ್ಲ. ಕೀರ್ತಿ ಸ್ತಂಭಗಳು ಕುಸಿದು ಬೀಳುತ್ತವೆ, ರಾಷ್ಟ್ರಗಳು ನಾಶಗೊಳ್ಳುತ್ತವೆ. ನಾಗರಿಕತೆಗಳಿಗೆ ವೃದ್ಧಾಪ್ಯ ಬಂದು ಅವೂ ಸತ್ತು ಹೋಗುತ್ತವೆ, ಆದರೆ ಪುಸ್ತಕಗಳಿಗೆ ಸಾವು ಬರುವುದಿಲ್ಲ ." ಪಾಪು ಅವರದು ಎಷ್ಟೊಂದು ಅದ್ಭುತ ನುಡಿಯಲ್ಲವೇ?

ಹಿನ್ನೆಲೆ:
1923ರ ಏಪ್ರಿಲ್ 23ರಂದು ಸ್ಪೇನ್‌ನಲ್ಲಿ ಮಿಗೆಲ್‌ದ ಸೆರ್ವಾಂಟಿಸ್ ನಿಧನರಾದರು. ವಿಶ್ವ ಸಾಹಿತ್ಯಕ್ಕೆ 'ಡಾನ್ ಕ್ವಿಕ್ಸೋಟ್‌' ಕೊಟ್ಟ ಅಮರ ಲೇಖಕನಾತ. ಅವರ ಗೌರವಾರ್ಥವಾಗಿ ಆ ದಿನ ಪುಸ್ತಕ ದಿನವನ್ನಾಗಿ ಸ್ಪೇನ್‌ನ ಪುಸ್ತಕ ವ್ಯಾಪಾರಿಗಳು, ಪ್ರ ಕಾಶಕರು 1923ರಿಂದಲೇ ಆಚರಿಸಲಾರಂಭಿಸಿದರು. ಕಾಕತಾಳೀಯವೆಂಬಂತೆ ಅದೇ ದಿನ ಶೇಕ್ಸ್‌ಪಿಯರನ ಜನ್ಮದಿನವೂ,  ಮರಣ ದಿನವೂ ಹೌದು. ಹಾಗಾಗಿ ಪ್ರ ತಿ ಏಪ್ರಿಲ್ 23 ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುವಂತೆಯೂ, ಪುಸ್ತಕದ ಕುರಿತು, ಲೇಖಕರ ಕುರಿತು, ಗ್ರಂಥ ಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವಂತೆಯೂ, ಓದಿನ ಅಭಿರುಚಿ  ಪುಸ್ತಕ ಪ್ರೀತಿ ಬೆಳೆಸುವಂತಹ ದಿನವನ್ನಾಗಿ ಆಚರಿಸುವಂತೆಯೂ ವಿಶ್ವ ಸಂಸ್ಥೆ ಕರೆ ನೀಡಿದೆ. 1995ರ ಏಪ್ರಿಲ್ 23ರಿಂದ ಈ ಪುಸ್ತಕ ದಿನ ವಿಶ್ವಾದ್ಯಂತ ಆಚರಣೆಯಲ್ಲಿದೆ.

ವಾಸ್ತ ವತೆ:
ಲೋಕವೇನೋ ಸೃಷ್ಟಿಯಾಯಿತು. ಆ ಸೃಷ್ಟಿ ಪಿರಮಿಡ್‌ನ ತುದಿಯಲ್ಲಿ ಮಾನವನದೂ ಸೃಷ್ಟಿಯಾಯಿತು. ಪರಿಪೂರ್ಣತೆಗೆ ಆ ಮಾನವ ಇನ್ನೊಂದು ಲೋಕವನ್ನು ಸೃಷ್ಟಿಸಿಕೊಂಡ - ಅದೇ ಪುಸ್ತಕ ಲೋಕ. ಹೌದು, ಜಗತ್ತಿನ ಸಂಸ್ಕೃತಿ, ನಾಗರಿಕತೆಗಳಿಗೆ ಪುಸ್ತಕ ಸಂಸ್ಕೃತಿಯೇ ಬುನಾದಿ. ಪುಸ್ತಕ ಸ್ವರೂಪ ಕಂಡುಹಿಡಿದ ಆ ವಿಜ್ಞಾನಿಗೆ ಮೊದಲು ನಮಸ್ಕರಿಸೋಣ. ಪುಸ್ತಕಗಳಿವೆಯೆಂದೇ ನಾವು ಜಗತ್ತನ್ನೂ, ಅದು ವಿಕಾಸಗೊಂಡ ಬಗೆಯನ್ನೂ ಬಲ್ಲೆವು. ಜ್ಞಾನದ ದೀವಿಗೆ ಸದಾ ಬೆಳಗುತ್ತಿರುವುದೇ ಪುಸ್ತಕಗಳಿಂದ. ಪುಸ್ತಕಗಳೇ ಇರದಿದ್ದರೆ ಅಕ್ಷರಗಳಿಗೆ ಅರ್ಥವಾದರೂ ಎಲ್ಲಿರುತ್ತಿತ್ತು? ಲೋಕದ ಜ್ಞಾನವೇನಿದ್ದರೂ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಮಾತ್ರ ದೊರೆತೀತು ಎಂಬ ಭಾವನೆ ಸಲ್ಲದು. ಮನೆಯಲ್ಲೊಂದು ಗ್ರಂ ಥಾಲಯವಿಟ್ಟುಕೊಂಡರೆ ಸಮೃದ್ಧ ಜ್ಞಾನವೇ ಅಲ್ಲಿರುತ್ತದೆ. ಗಾಳಿಯಾಡಲು, ಬೆಳಕು ಬೀರಲು ಕಿಟಕಿಗಳಿರುವಂತೆ, ಜ್ಞಾನ ನೀಡಲು ಮನೆಯಲ್ಲಿ ಪುಸ್ತಕಗಳಿರಲೇ ಬೇಕು. ಅಡುಗೆ ಮನೆ, ರೆಫ್ರಿಜರೇಟರ್‌ಗಳೇನಿದ್ದರೂ ನಮ್ಮ ದೈಹಿಕ ಆಹಾರಗಳನ್ನು ಒದಗಿಸಲು. ಆದರೆ, ಅದಕ್ಕಿಂತ ಅಥವಾ ಅದರಷ್ಟೇ ಮುಖ್ಯ ನಮಗೆ ನಮ್ಮ ಮನೆಯ ಪುಟ್ಟ ಗ್ರಂಥಾಲಯವೂ ಆಗಬೇಕು. ಪುಸ್ತಕಗಳ ಓದಿನ ಪರಿಣಾಮ ಮನೆ ಮಂದಿಯ ಮೇಲೆ ಆದಂತೆ, ಮನೆಯ ಪುಟಾಣಿಗಳಿಗೂ ಓದಿನ ರುಚಿ ಅಂಟುತ್ತದೆ. ಆ ಅಭಿರುಚಿಯಿಂದಲೇ ನಮ್ಮ ಭಾವ ಸಂಸ್ಕಾರಗೊಳ್ಳುತ್ತದೆ. ಕ್ರಾಂತಿಯ ವಿಚಾರ ಒತ್ತಟ್ಟಿಗಿರಲಿ, ಪುಸ್ತಕಗಳಿಂದ ಭಾವ ಸಂಸ್ಕಾರವಂತೂ ಖಂಡಿತ ಆಗುತ್ತದೆ. ಯಾರೇ ದೊಡ್ಡ ಸಾಧಕರನ್ನು ನೆನಪಿಸಿಕೊಳ್ಳಿ. ಪಂಡಿತ ವಿದ್ವಾಂಸರಂತೂ ಸರಿಯೇ ಸರಿ. ವಿಜ್ಞಾನಿಯೋ, ಸಾರ್ವಜನಿಕ ನಾಯಕನೋ, ದೊಡ್ಡ ಉದ್ಯಮಿಯೋ, ಅತ್ಯುತ್ತಮ ಶಿಕ್ಷಕನೋ, ಉತ್ಕೃಷ್ಟ ವಕೀಲನೋ, ಅತ್ಯುತ್ತಮ ವೈದ್ಯನೋ  ಹೀಗೆ ಸಮಾಜಕ್ಕೆ ಒಳಿತನ್ನು ಮಾಡಿಹೋದ, ಮಾಡುತ್ತಿರುವ ಯಾರನ್ನೇ ಗಮನಿಸಿ, ಆತ ಖಂಡಿತವಾಗಿಯೂ ಅತ್ಯುತ್ತಮ ಓದುಗನಾಗಿರುತ್ತಾನೆ. ಓದಿ ಓದಿಯೇ ಆತ ಸಾಧಕನಾಗಿರುತ್ತಾನೆ. ಜಗತ್ತಿನ ದೊಡ್ಡ ಶ್ರೀಮಂತ, ಸಾಫ್ಟ್‌ವೇರ್ ತಂತ್ರಜ್ಞ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಒಂದು ಸಂದರ್ಶನದಲ್ಲಿ ಅವರು ಹೇಳಿದ್ದೇನು ಗೊತ್ತೇ? 'ಎಲ್ಲಿಯೇ ಹೋಗುವಾಗಲೂ ನನ್ನ ಬ್ರೀಫ್‌ಕೇಸ್ ತುಂಬ ಪುಸ್ತಕಗಳನ್ನಿಟ್ಟುಕೊಂಡಿರುತ್ತೇನೆ. ವಿಮಾನ ಎಷ್ಟೇ ತಡವಾಗುವ ಪ್ರ ಸಂಗ ಬಂದರೂ, ಯಾರಿಗೇ ಆಗಲಿ ಕಾಯಬೇಕಾದ ಸಂದರ್ಭ ಒದಗಿದರೂ ನನಗೆ ನಷ್ಟವೆನಿಸುವುದಿಲ್ಲ. ಏಕೆಂದರೆ, ಅಂತಹ ಎಲ್ಲ ಸಂದರ್ಭಗಳಲ್ಲೂ ನನ್ನ ಕೈಯಲ್ಲಿ ಪುಸ್ತಕ ಇದ್ದೇ ಇರುತ್ತದೆ' ಎಂದು. ಓದಲು ಬಾರದ ನಿರಕ್ಷರಿಗೂ, ಓದುವ ಹವ್ಯಾಸವೇ ಇರದ ಸಾಕ್ಷರಿಗೂ ವಿಶೇಷ ವ್ಯತ್ಯಾಸವಿಲ್ಲ ಎಂಬ ಮಾತಿದೆ. ಅದು ಅಕ್ಷರಶಃ ಸತ್ಯ. ಓದದೇ ನಾವು ಬೆಳೆಯಲಾರೆವು. ಯಾವ ವೃತ್ತಿಯಲ್ಲಿದ್ದರೂ ಸರಿ, ದಿನ ದಿನವೂ ಬೆಳೆಯುತ್ತಿರಬೇಕು. ನಿನ್ನೆಗಿಂತ ಇಂದಿನ ನಮ್ಮ ಮೌಲ್ಯ ಹೆಚ್ಚಾಗುತ್ತಿರಬೇಕು. ಪ್ರ ತಿದಿನವೂ ನಾವು ಅಪ್‌ಡೇಟ್ ಆಗುತ್ತಿರಬೇಕು. ಜ್ಞಾನ ಶ್ರೀಮಂತಿಕೆಯಲ್ಲಿ, ಔದಾರ್ಯದಲ್ಲಿ, ಮಾನವತೆಯಲ್ಲಿ ನಾವು ಏರುತ್ತಲೇ ಇರಬೇಕು. ಜಗತ್ತಿನ ಜ್ಞಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇಂದಿನ ವಿಜ್ಞಾನ-ತಾಂತ್ರಿಕತೆಯಿಂದಾಗಿ, ಪ್ರ ತಿ ಐದು ವರ್ಷಕ್ಕೆ ಜಗತ್ತಿನ ಜ್ಞಾನ ದ್ವಿಗುಣಗೊಳ್ಳುತ್ತಿದೆಯಂತೆ. ತಾಂತ್ರಿಕತೆಯಂತೂ ಪ್ರ .ತಿ ಒಂದೂವರೆ ವರ್ಷಕ್ಕೆ ಹಳೆಯದಾಗುತ್ತಿದೆಯಂತೆ. ನಾವು ಓದಿ ತಿಳಿದುಕೊಳ್ಳದೇ ಹೋದರೆ, ಮುಂದೊಂದು ದಿನ ನಾವು ನಗಣ್ಯರೆನಿಸಿಬಿಡುತ್ತೇವೆ.

      ಇಂದು ಬಹಳಷ್ಟು  ಜನರ ಗೊಣಗಾಟವೆಂದರೆ, 'ಓದಿಗೆ ಸಮಯವೇ ಇಲ್ಲ. ನಮ್ಮ ಕೆಲಸದ ಹೊರೆಯೇ ಸಾಕಷ್ಟಿರುವಾಗ ಓದಲು ಪುರುಸೊತ್ತಾದರೂ ಎಲ್ಲಿರುತ್ತದೆ?' ಎಂಬುದು. ಇದು ಓದಿನ ರುಚಿ ತಿಳಿಯದ ಹೆಡ್ಡನಾಡುವ ಮಾತುಗಳು. ಓದಿನ ಮೌಲ್ಯವರಿಯದ ಮೂಢನ ಮಾತು. ಸೋಮಾರಿಯೊಬ್ಬನ ಸಮರ್ಥನೆಯ ನುಡಿಗಳಿವು. ಓದುವ ಚಟ ಅಂಟಿಸಿಕೊಂಡ  ಮನುಷ್ಯನು ಪ್ರ   ತಿದಿನ ಓದದೆ ಸಮಾಧಾನಪಡಲಾರ. ಓದದೇ ನಿದ್ದೆ ಹೋಗಲಾರ. 'ಅನ್ ಟು ದಿ ಲಾಸ್ಟ್‌' ಗಾಂಧೀಜಿಯವರ ಮೇಲೆ ಗಾಢ ಪರಿಣಾಮ ಬೀರಿದ ಕೃತಿಯಂತೆ. ಪ್ರ ತಿಯೊಬ್ಬ ದೊಡ್ಡ ವ್ಯಕ್ತಿಯೂ ಪುಸ್ತಕಗಳಿಂದ ಪ್ರ ಭಾವಿತರಾದವರೇ. ಪುಸ್ತಕಗಳಿಂದಲೇ ದೊಡ್ಡವರಾದವರು. ಅದನ್ನು ಅರಿಯದ ದುರಂತ ಇಂದು ನಮ್ಮೆದುರಿಗಿದೆ. ನಮ್ಮ ಹಿಂದಿನ ರಾಜಕಾರಣಿಗಳೂ ಪುಸ್ತಕ ಓದುತ್ತಿದ್ದರು. ರಾಜಾಜಿ- ರಾಧಾಕೃಷ್ಣನ್ ಅವರಂಥವರ ಮಾತು ಬಿಡಿ, ನಮ್ಮ ರಾಜ್ಯದ ನಿಜಲಿಂಗಪ್ಪ-ಅರಸು-ರಾಮಕೃಷ್ಣ ಹೆಗಡೆ ಮುಂತಾದವರು ವಿಪುಲ ಓದುಗರಾಗಿದ್ದರು. ರಾಜಕಾರಣದಿಂದ ಸರಿದ ನಂತರವೂ ಅವರ ಬದುಕನ್ನು ವಿಸ್ತರಿಸಿದ್ದು ಪುಸ್ತಕಗಳೇ. ಆ ವ್ಯತ್ಯಾಸ ಈಗಿನ ರಾಜಕಾರಣಿಗಳಲ್ಲಿ ಗುರುತಿಸಬಹುದು. ಅಂತೆಯೇ ದಿನದಿನವೂ, ಪ್ರ ತಿ ಪಾಠದ ಮೊದಲೂ ಓದಲೇಬೇಕಾದ ಶಿಕ್ಷಕರೂ ಓದುತ್ತಿಲ್ಲ. ಓದಿ ಬೆಳೆಯುತ್ತಿಲ್ಲ. ಅದರ ಪರಿಣಾಮವನ್ನು ಅವರು ತಯಾರಿಸಿ ಹೊರಹಾಕುತ್ತಿರುವ ಉತ್ಪಾದನೆಯಲ್ಲಿ ಕಾಣುತ್ತಿದ್ದೇವೆ. ಓದಿನ ರುಚಿ ಮೊತ್ತ ಮೊದಲಿಗೆ ಬೆಳೆಸಬೇಕಾದವರು ಪಾಲಕರು. ನಂತರ ಖಂಡಿತವಾಗಿಯೂ ಶಿಕ್ಷಕರು. ಇಂದಿನ ದಿನಗಳಲ್ಲಿ ಈ ಇಬ್ಬರೂ ಬೇರೆ ಹವ್ಯಾಸಗಳಿಗೆ ಅಂಟಿಬಿಟ್ಟಿರುವುದು ನಾವು ನೋಡುತ್ತಿದ್ದೇವೆ. ಅದು ಹಾಗಾಗಬಾರದು. ಪುಸ್ತಕಗಳೊಂದಿಗಿರುವವನು ಎಂದಿಗೂ ಒಬ್ಬಂಟಿಯಾಗಿರಲಾರ. ತನ್ನ ಅಪೂರ್ಣತೆಯನ್ನು ಓದಿನ ಮೂಲಕ ತುಂಬಿಕೊಳ್ಳಬಹುದು. ಜ್ಞಾನಕ್ಕೆ ಸರಿಸಮ ಯಾವುದೂ ಇಲ್ಲವೆಂದು ಋಷಿವಾಣಿ ಹೇಳುತ್ತದೆ. ಪುಸ್ತಕಗಳೊಂದಿಗೆ ಇರುವಾತ ಕಾಲಾತೀತವಾದ ಮನುಷ್ಯ ಚೇತನದೊಂದಿಗೆ ಇರುವಂತೆ ಎಂದು ನಂಬಿದ ಗ್ರಂಥಪಾಲಕರೊಬ್ಬರು - ಕೆ.ಎಸ್. ದೇಶಪಾಂಡೆ- ತಾವು ವಿನ್ಯಾಸ ಮಾಡಿದ ಗ್ರಂಥಾಲಯಕ್ಕೆ Timeless spirit of Man' ಎಂದು ಹೆಸರಿಸಿದ್ದಾರೆ. ಸಾರ್ಥಕ ಗಿಡಮರಗಳ ಫಲಕ್ಕೆ ಆಯುರ್ಮಿತಿಯಿದೆ. ಗ್ರಂಥಾಲಯಗಳ ಪ್ರಭಾವಕ್ಕೆ ಪರಿಮಿತಿ ಇರಲಾರದು. ಓದು ಬಲ್ಲವನೇ ತತ್ವಜ್ಞಾನಿ  ತತ್ವಜ್ಞಾನಿಯೇ ರಾಜನಾಗಬೇಕು ಎಂಬ ಪ್ಲೇಟೋನ ನಿಲುವಿನಲ್ಲಿ ಅರ್ಥವಿದೆ. ಈಗಿನ ಅನುಕೂಲಸ್ಥರು ಪುಸ್ತಕಗಳನ್ನು ಓದುವ ಉತ್ಕೃಷ್ಟ ಹವ್ಯಾಸದಿಂದ ದೂರವಾಗುತ್ತಿದ್ದಾರೆ. ನಾಗರಿಕತೆ ಬೆಳೆಯದಿದ್ದಾಗ ನಿರಕ್ಷರತೆ ಇತ್ತು. ಈಗ ನಾಗರಿಕತೆ ಬೆಳೆದಿದೆ  ಸಾಂಸ್ಕೃತಿಕ ಅನಾಗರಿಕತೆ ಉಳಿದುಬಿಟ್ಟಿದೆ. ಸಾಂಸ್ಕೃತಿಕವಾಗಿ ನಾವು ವಿದ್ಯಾವಂತ ನಿರಕ್ಷರಿಗಳಾಗುತ್ತಿರುವುದು ಈಗಿನ ದೊಡ್ಡ ದುರಂತವಾಗಿದೆ. ಹಾಗಾಗದಿರಲಿ. ಪುಸ್ತಕಗಳನ್ನು ಹಚ್ಚಿಕೊಳ್ಳೋಣ. ಈ ದಿನ ಒಂದು ಕನ್ನಡದ/ಬೇರೆ ಭಾಷೆಯ ಒಳ್ಳೆಯ ಪುಸ್ತಕ ಓದೋಣ.

     ತಮ್ಮೆಲ್ಲರಿಗೂ ವಿಶ್ವ ಪುಸ್ತಕ ದಿನಾಚರಣೆಯ
             ಹಾರ್ದಿಕ ಶುಭಾಶಯಗಳು.

No comments:

Post a Comment